ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತವನ್ನು ಸೇರಿಸಿಕೊಳ್ಳುವುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ವಿದೇಶಾಂಗ ಸಚಿವ ಜೈಶಂಕರ್, ಕೆಲವೇ ಕೆಲವು ರಾಷ್ಟ್ರಗಳು ಅಜೆಂಡಾವನ್ನು ನಿರ್ಧರಿಸಿ ಉಳಿದ ರಾಷ್ಟ್ರಗಳು ಅದನ್ನು ಅನುಸರಿಸಲು ನಿರೀಕ್ಷಿಸುವ ಕಾಲ ಮುಗಿದಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ವಿದೇಶಾಂಗ ಸಚಿವರು, ಭಾರತ ತನ್ನ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಗ್ಲೋಬಲ್ ಸೌತ್ ನ ಧ್ವನಿಯಾಗಿತ್ತು ಹಾಗೂ ಅತ್ಯಂತ ಪ್ರತಿಷ್ಠಿತ ಸಂಘಟನೆಗೆ ಆಫ್ರಿಕಾ ಯೂನಿಯನ್ ನ್ನು ಸೇರಿಸಿಕೊಂಡಿತ್ತು. ಸುಧಾರಣೆಗೆ ಸಂಬಂಧಿಸಿದಂತೆ ಈ ಮಹತ್ವದ ನಡೆ, ಭದ್ರತಾ ಮಂಡಳಿಯನ್ನು ಪ್ರಸ್ತುತವಾಗಿರಿಸಲು ವಿಶ್ವಸಂಸ್ಥೆಗೂ ಸ್ಪೂರ್ತಿಯಾಗಬೇಕು ಎಂದು ಜೈಶಂಕರ್ ಹೇಳಿದ್ದಾರೆ.
ಭಾರತ ತಟಸ್ಥ ನಿಲುವಿನ ಕಾಲಘಟ್ಟದಿಂದ ವಿಶ್ವಮಿತ್ರನಾಗುವ (ಜಗತ್ತಿಗೆ ಸ್ನೇಹಿತ) ಹಂತಕ್ಕೆ ನಡೆದುಬಂದಿದೆ. ನಮ್ಮ ಸಮಾಲೋಚನೆಗಳಲ್ಲಿ ನಿಯಮ ಆಧಾರಿತ ವ್ಯವಸ್ಥೆಗಳನ್ನು ಉತ್ತೇಜಿಸುವುವುದನ್ನು ಹೆಚ್ಚು ಪ್ರತಿಪಾದಿಸುತ್ತೇವೆ. ಕಾಲ ಕಾಲಕ್ಕೆ ವಿಶ್ವಸಂಸ್ಥೆ ಸನ್ನದು ಗೌರವವು ಸಹ ಒಳಗೊಂಡಿದೆ. ಆದರೆ ಎಲ್ಲಾ ಮಾತುಕತೆಗಳಿಗೂ ಮುನ್ನ, ಕೆಲವು ರಾಷ್ಟ್ರಗಳು ಅಜೆಂಡಾಗಳನ್ನು ನಿರ್ಧರಿಸಿ ನಿಯಮಗಳನ್ನು ವ್ಯಾಖ್ಯಾನಿಸುವುದಕ್ಕೆ ಕೇಳುವುದು ನಡೆಯುತ್ತಿದೆ. ಇದು ಶಾಶ್ವತವಾಗಿ ನಡೆಯುವುದಕ್ಕೆ ಸಾಧ್ಯವಿಲ್ಲ. ಇನ್ನು ಮುಂದೆ ಇದಕ್ಕೆ ಸವಾಲು ಹಾಕದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.
"ನಾವೆಲ್ಲರೂ ಒಮ್ಮೆ ನಮ್ಮ ಮನಸ್ಸನ್ನು ಇಟ್ಟರೆ ಒಂದು ನ್ಯಾಯೋಚಿತ, ಸಮಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಖಂಡಿತವಾಗಿಯೂ ಹೊರಹೊಮ್ಮುತ್ತದೆ. ಮತ್ತು, ಪ್ರಾರಂಭಕ್ಕಾಗಿ, ನಿಯಮ-ನಿರ್ಮಾಪಕರು ನಿಯಮ-ನಿರೂಪಕರನ್ನು ಅಧೀನಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇವೆಲ್ಲವೂ ಅನ್ವಯಿಸಿದಾಗ ಮಾತ್ರ ನಿಯಮಗಳು ಎಲ್ಲರಿಗೂ ಸಮಾನವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಜೈಶಂಕರ್ ಹೇಳಿದ್ದಾರೆ.
ವಿಶ್ವಸಂಸ್ಥೆಯು ಮುಂದಿನ ವರ್ಷ 'ಭವಿಷ್ಯದ ಶೃಂಗಸಭೆ'ಯನ್ನು ನಡೆಸಲಿದೆ ಎಂಬುದನ್ನು ಉಲ್ಲೇಖಿಸಿದ ಸಚಿವರು, "ಇದು ಭದ್ರತಾ ಮಂಡಳಿಯ ಸದಸ್ಯತ್ವಗಳ ವಿಸ್ತರಣೆ ಸೇರಿದಂತೆ ಬದಲಾವಣೆ, ಸಮರ್ಥನೀಯತೆ ಮತ್ತು ಬಹುಪಕ್ಷೀಯತೆಯನ್ನು ಸುಧಾರಿಸಲು ಗಂಭೀರ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಭೂಮಿ ಮತ್ತು ಒಂದು ಕುಟುಂಬ, ಒಂದು ಭವಿಷ್ಯದೊಂದಿಗೆ ಎಂಬ ದೃಢವಿಶ್ವಾಸದಿಂದ ಜಾಗತಿಕ ಸವಾಲುಗಳನ್ನು ನಾವು ಎದುರಿಸಬೇಕು ಎಂದು ಸಚಿವರು ಹೇಳಿದ್ದಾರೆ.