ಎರ್ನಾಕುಳಂ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೈಕೋರ್ಟ್ ನಿರ್ಣಾಯಕ ಆದೇಶ ನೀಡಿದೆ. ಪೋಕ್ಸೋ ಪ್ರಕರಣಗಳ ಆರೋಪಿಗಳಿಗೆ ಪ್ರಾಥಮಿಕ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಸುಳ್ಳು ಆರೋಪದ ಮೇಲೆ ಅಮಾಯಕರನ್ನು ಸಿಲುಕಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ ವಾಸ್ತವಾಂಶವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಏಕ ಪೀಠ ಹೇಳಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಈ ಆದೇಶ ನೀಡಿದೆ. ತಪ್ಪಿತಸ್ಥರನ್ನು ಶಿಕ್ಷಿಸುವುದರ ಜೊತೆಜೊತೆಗೇ ಅಮಾಯಕರ ರಕ್ಷಣೆಯೂ ಮುಖ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮತ್ತೊಂದು ತೀರ್ಪಿನಲ್ಲಿ, ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಕ್ಕಳ ಪಾಲನೆ ವಿವಾದಗಳಲ್ಲಿ ತಂದೆಯ ವಿರುದ್ಧ ಕಿರುಕುಳದ ಸುಳ್ಳು ಆರೋಪಗಳ ಅನೇಕ ಪ್ರಕರಣಗಳಿವೆ ಎಂದು ಹೈಕೋರ್ಟ್ ಸೂಚಿಸಿದೆ. ಅಂತಹ ಸಂದರ್ಭಗಳಲ್ಲಿ ನಿರೀಕ್ಷಣಾ ಜಾಮೀನು ನಿಷೇಧಿಸಿದರೆ ಅದು ನ್ಯಾಯದ ನಿರಾಕರಣೆಯಾಗುತ್ತದೆ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಸೂಚಿಸಿದರು.