ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಬೋಸ್ ಅವರು ಬಿಜೆಪಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಸೇರುವ ವೇಳೆ ನೇತಾಜಿ ಅವರ ಸಿದ್ಧಾಂತವನ್ನು ಪ್ರಚುರಪಡಿಸಲು ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಆದರೆ ಅದನ್ನು ಪೂರೈಸದಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
2016ರಲ್ಲಿ ಬಿಜೆಪಿ ಸೇರಿದ್ದ ಅವರು ಅದೇ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
'ನಾನು ಬಿಜೆಪಿ ಸೇರುವ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಶರತ್ ಚಂದ್ರ ಬೋಸ್ ಅವರ ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತವನ್ನು ಪ್ರಚಾರಪಡಿಸಲು ಅವಕಾಶ ನೀಡುವುದಾಗಿ ಹೇಳಿತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ' ಎಂದು ಅವರು ಹೇಳಿದ್ದಾರೆ.
2016ರಲ್ಲಿ ಚಂದ್ರಬೋಸ್ ಅವರನ್ನು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2020ರಲ್ಲಿ ಕೈ ಬಿಡಲಾಗಿತ್ತು.
ಬಿಜೆಪಿ ವೇದಿಕೆಯಲ್ಲಿ ದೇಶದಾದ್ಯಂತ ಸುಭಾಸ್ ಚಂದ್ರ ಬೋಸ್ ಹಾಗೂ ಶರತ್ ಬೋಸ್ ಅವರ ಸಿದ್ಧಾಂತಗಳನ್ನು ಪ್ರಚುರಪಡಿಸಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ಇದಕ್ಕಾಗಿ ಆಜಾದ್ ಹಿಂದ್ ಮೋರ್ಚಾವನ್ನೂ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಇದರಡಿ ಜಾತಿ-ಧರ್ಮಗಳ ಬೇಧವಿಲ್ಲದೆ ನೇತಾಜಿ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ಉದ್ದೇಶಿಸಲಾಗಿತ್ತು ಎಂದು ಅವರು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
'ದೇಶವನ್ನು ಒಗ್ಗೂಡಿಸಲು ಇದು ಅವಶ್ಯಕವಾಗಿತ್ತು. ನನ್ನ ಈ ಪ್ರಯತ್ನಕ್ಕೆ ರಾಜ್ಯ ಹಾಗೂ ಕೇಂದ್ರ ಬಿಜೆಪಿಯಿಂದ ಯಾವುದೇ ಬೆಂಬಲ ಸಿಕ್ಕಿಲ್ಲ. ಪಶ್ಚಿಮ ಬಂಗಾಳದ ಜನರನ್ನು ತಲುಪಲು ನಾನು ನೀಡಿದ ವಿಸ್ಕೃತ ತಂತ್ರವನ್ನೂ ನಿರ್ಲಕ್ಷಿಸಲಾಯಿತು' ಎಂದು ಅವರು ಹೇಳಿದ್ದಾರೆ.