ಕಾಸರಗೋಡು: ನಗರದ ಬೀರಂತಬೈಲ್ ನಿವಾಸಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ, ಗಡಿನಾಡಿನ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿ ನೇತಾರ ಎಸ್.ವಿ ಭಟ್ ಎಂದೇ ಪರಿಚಿತರಾಗಿರುವ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್(72)ಭಾನುವಾರ ತೀವ್ರ ಹೃದಯಾಘಾತದಿಂದ ನಿಧನರಾದರು.
ಬದಿಯಡ್ಕ ಸನಿಹದ ವಳಮಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇವರು ಎದೆನೋವಿನಿಂದ ಕುಸಿದು ಬಿದ್ದಿದ್ದು, ತಕ್ಷಣ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಸತತ ಮೂರು ಬಾರಿ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೂಲತ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸಾಲಕೋಡು ಗ್ರಾಮದ ನಿವಾಸಿಯಾಗಿರುವ ಇವರು, 1975ರಲ್ಲಿ ಕಾಸರಗೋಡಿಗೆ ಆಗಮಿಸಿದ್ದರು. ಧಾರವಾಡ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು, ಕುಮಟಾದಲ್ಲಿ ಬಿ.ಇಡಿ ಶಿಕ್ಷಣ ಪೂರೈಸಿರುವ ಇವರು ಕಾಸರಗೋಡಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಂತರ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ನಂತರ ತಮ್ಮ ಸಂಪೂರ್ಣ ಕಾಲಾವಧಿಯನ್ನು ಕನ್ನಡಪರ ಚಟುವಟಿಕೆಗಳಿಗೆ ಮೀಸಲಿರಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಲವಾರು ಯಶಸ್ವೀ ಜಿಲ್ಲಾ ಸಮ್ಮೇಳನವನ್ನು ನಡೆಸಿಕೊಟ್ಟಿದ್ದರು. 2022-23ನೇ ಸಾಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ನಡೆಸಲು ಯೋಜನೆಹಮ್ಮಿಕೊಳ್ಳುತ್ತಿದ್ದಂತೆ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಪಠ್ಯಪುಸ್ತಕ, ಆಧಾರಗ್ರಂಥ, ಸಹಾಯ ಕೈಪಿಡಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪದಾಧಿಕಾರಿ, ಕಾಸರಗೋಡು ಹವ್ಯಕ ಸಭಾ ಕಾರ್ಯದರ್ಶಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಸಕ್ರಿಯರಾಗಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ಇವರು, ಮುಖ್ಯಶಿಕ್ಷಕರಾಗಿ, ಶಿಕ್ಷಣಾಧಿಕಾರಿಯಾಗಿ ಶಿಕ್ಷಣ ವಲಯದಲ್ಲಿ ಹಲವಾರು ಸುಧಾರಣೆಗಳಿಗೆ ಕಾರಣಕರ್ತರಾಗಿದ್ದರು. ಯಕ್ಷಗಾನಪ್ರಿಯರಾಗಿದ್ದ ಇವರು, ಯಕ್ಷಗಾನ ಹವ್ಯಾಸಿ ವೇಷಧಾರಿ, ಅರ್ಥಧಾರಿಯಾಗಿಯೂ ಗಮನಸೆಳೆದಿದ್ದರು.
ಅವರು ಪತ್ನಿ ನಿವೃತ್ತ ಅಂಚೆ ಇಲಾಖೆ ಅಧಿಕಾರಿ ತಾರಾ, ಪುತ್ರ ಡಾ. ಮುರಳೀಧರ ಹಾಗೂ ಇಂಜಿನಿಯರ್ ಹುದ್ದೆಯಲ್ಲಿರುವ ಪುತ್ರಿ ವೀಣಾ ಅವರನ್ನು ಅಗಲಿದ್ದಾರೆ. ಮೃತದೇಹ ಚೆಂಗಳದ ಇ.ಕೆ ನಾಯನಾರ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ನಾಳೆ ಬೀರಂತಬೈಲಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.