ಲಖನೌ: ಉತ್ತರ ಪ್ರದೇಶದಲ್ಲಿ ಐವರು ಮಹಿಳಾ ಕಾನ್‌ಸ್ಟೆಬಲ್‌ಗಳು ಲಿಂಗ ಪರಿವರ್ತನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ರಾಜ್ಯ ಪೊಲೀಸ್ ಇಲಾಖೆಯು ಉಭಯ ಸಂಕಟಕ್ಕೆ ಸಿಲುಕಿದೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಲಿಂಗ ಗುರುತಿನ ಯಾತನೆ ಅನುಭವಿಸುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ಲಿಂಗ ಪರಿವರ್ತನೆಗೆ ಅನುಮತಿ ಕೋರಿದ್ದರು.
'ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಲಿಂಗ ಪರಿವರ್ತನೆಗೆ ಅನುಮತಿ ಸಿಗಬಹುದು. ಆದರೆ, ಭವಿಷ್ಯದಲ್ಲಿ ಮಹಿಳೆಯರಿಗೆ ಇಲಾಖೆಯಿಂದ ನಿಗದಿಪಡಿಸಿರುವ ಯಾವುದೇ ಸೌಲಭ್ಯಗಳು ಅವರಿಗೆ ಲಭಿಸುವುದಿಲ್ಲ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಈಗಾಗಲೇ, ಇಬ್ಬರು ಕಾನ್‌ಸ್ಟೆಬಲ್‌ಗಳು ಈ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಅರ್ಹತೆಯ ಮೇಲೆ ಈ ವಿಷಯವನ್ನು ಪರಿಗಣಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಇಲಾಖೆಗೆ ನ್ಯಾಯಾಲಯವು ಸೂಚಿಸಿದೆ. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನೀತಿಯೊಂದನ್ನು ರೂಪಿಸುವಂತೆಯೂ ನಿರ್ದೇಶನ ನೀಡಿದೆ.
'ನಾವು ಹೆಣ್ಣು ಅಥವಾ ಗಂಡು ಎಂದು ಲಿಂಗ ಗುರುತಿಸುವಿಕೆಯಲ್ಲಿ ಮುಜುಗರ ಅನುಭವಿಸುತ್ತಿದ್ದೇವೆ. ಇದು ನಮ್ಮನ್ನು ಆತಂಕ ಹಾಗೂ ಖಿನ್ನತೆಗೆ ದೂಡಿದೆ. ಹಾಗಾಗಿ, ಲಿಂಗ ಪರಿವರ್ತನೆಗೆ ಅನುಮತಿ ನೀಡಬೇಕು' ಎಂದು ಕಾನ್‌ಸ್ಟೆಬಲ್‌ವೊಬ್ಬರು ಅರ್ಜಿಯಲ್ಲಿ ಕೋರಿದ್ದಾರೆ.
'ಈ ಬೆಳವಣಿಗೆಯಿಂದ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ, ತನ್ನ ನೇಮಕಾತಿ ನೀತಿಯಲ್ಲಿ ಬದಲಾವಣೆಗೆ ತರಲು ಪೊಲೀಸ್ ಇಲಾಖೆಯು ಮುಂದಾಗಿದೆ' ಎಂದು ಮೂಲಗಳು ತಿಳಿಸಿವೆ.