ತಿರುವನಂತಪುರಂ: ಮಗನ ಸಾವಿನ ಸುದ್ದಿ ತಿಳಿದ ಸರ್ಕಾರಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಯನಾಡಿನಲ್ಲಿ ಪಶುವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಆಕೆಯ ಪುತ್ರ ಎಂ. ಸಜ್ಜಿನ್ ಮಂಗಳವಾರ ಸಂಜೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಈ ಸುದ್ದಿ ಹೊರಬಿದ್ದಾಗ, ರಾಜಧಾನಿಯ ಹೊರವಲಯದಲ್ಲಿರುವ ನೆಡುಂಗಡುವಿನಲ್ಲಿ ವಾಸಿಸುವ ಶೀಜಾ ಬೇಗಂ ಅವರ ಆಪ್ತರು ಈ ಸುದ್ದಿ ತಿಳಿದು ವಯನಾಡಿಗೆ ಹೋಗಲು ನಿರ್ಧರಿಸಿದ್ದಾರೆ. ಆದಾಗ್ಯೂ, ಮಗನ ಸಾವಿನ ಬಗ್ಗೆ ಶೀಜಾಗೆ ತಿಳಿಸದಿರಲು ನಿರ್ಧರಿಸಿದ್ದಾರೆ. ಬಳಿಕ ಅವರು ಆಕೆಯನ್ನು ಅವರ ಸಂಬಂಧಿಯ ಮನೆಯಲ್ಲಿ ಉಳಿಯುವಂತೆ ಹೇಳಿದ್ದಾರೆ.
ಮಂಗಳವಾರ ರಾತ್ರಿ ಶೀಜಾ ಅವರು ಫೇಸ್‌ಬುಕ್ ಮೂಲಕ ಮಗನ ಸಾವಿನ ವಿಷಯ ತಿಳಿದಿದ್ದಾರೆ. ಬಳಿಕ ರಾತ್ರಿ ತಂಗಿದ್ದ ಮನೆಯಲ್ಲಿದ್ದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಇದೀಗ ತಾಯಿ ಮತ್ತು ಮಗನ ಅಂತಿಮ ಸಂಸ್ಕಾರವನ್ನು ಇಲ್ಲಿಯೇ ನಡೆಸಲು ಕುಟುಂಬ ನಿರ್ಧರಿಸಿದೆ.