ಇಂಫಾಲ್: ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಗುರುವಾರ ಬೆಳಿಗ್ಗೆವರೆಗೆ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಉದ್ರಿಕ್ತರ ಗುಂಪು ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಿದೆ. ಎರಡು ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆಯಿಂದ ಇಂಫಾಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಉರಿಪೊಕ್, ಯೈಸ್ಕುಲ್, ಸಗೋಲ್‌ಬಂಡ್ ಮತ್ತು ತೇರಾ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಬುಧವಾರ ರಾತ್ರಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದಿದ್ದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದರು.
ವಸತಿ ಪ್ರದೇಶಗಳಿಗೆ ಭದ್ರತಾ ಸಿಬ್ಬಂದಿ ಪ್ರವೇಶಿಸುವುದನ್ನು ತಡೆಯಲು ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟರು. ಬಂಡೆ ಗಾತ್ರದ ಕಲ್ಲುಗಳನ್ನು ರಸ್ತೆಗೆ ಉರುಳಿಸಿದರು. ಕಬ್ಬಿಣದ ಪೈಪ್‌ಗಳನ್ನು ಅಡ್ಡಲಾಗಿ ಹಾಕಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಧ್ವಂಸ ಮಾಡಿ, ಎರಡು ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ ಎಂದೂ ಹೇಳಿದ್ದಾರೆ.
ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದರಿಂದ ಇಂಫಾಲ್ ಪೂರ್ವ ಮತ್ತು ಪಶ್ಚಿಮದಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದೆ. ಒಟ್ಟು 65 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಈ ನಡುವೆ, ತೌಬಲ್ ಜಿಲ್ಲೆಯ ಖೋಂಗ್ಜಾಮ್‌ನಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ರಿಕ್ತರ ಗುಂಪು ಪೊಲೀಸ್ ವಾಹನವನ್ನು ಸುಟ್ಟು ಹಾಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದೆ ಎಂದು ಹೇಳಿಕೆಯಲ್ಲಿ ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಮೇ 3ರಂದು ಮೈತೇಯಿ ಮತ್ತು ಕುಕಿ ಜನಾಂಗಗಳ ನಡುವೆ ಘರ್ಷಣೆ ಆರಂಭವಾದಾಗಿನಿಂದ 180ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳ ಆರೋಪ:
ನಾಪತ್ತೆಯಾಗಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಸರ್ಕಾರ ವಿಫಲವಾಗಿದೆ. ಆದರೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರೀಯ ಪಡೆಗಳು ನಿರ್ದಯವಾಗಿ ಹತ್ತಿಕ್ಕಲು ಅವಕಾಶ ಕೊಟ್ಟಿವೆ. ಇದರಿಂದ ಸುಮಾರು 200 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳ ಸಂಘಟನೆಯಾದ ಮಣಿಪುರದ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಅಲೈಯನ್ಸ್ ಆರೋಪಿಸಿದೆ.
ವಿದ್ಯಾರ್ಥಿಗಳ ವಿರುದ್ಧ ಕ್ಷಿಪ್ರ ಕಾರ್ಯಪಡೆ ಮತ್ತು ಇತರ ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮವನ್ನು ಮಣಿಪುರ ಏಕತೆಗಾಗಿ ಸಮನ್ವಯ ಸಮಿತಿಯು ಖಂಡಿಸಿದೆ. ಭದ್ರತಾಪಡೆಗಳ ಇಂತಹ ಕಾರ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದೆ.
ರಾಜ್ಯದಲ್ಲಿನ ಜನಾಂಗೀಯ ಘರ್ಷಣೆಗೆ ಆಫ್‌ಸ್ಪಾ ಪರಿಹಾರ ಆಗಲಾರದು. ಈ ಪ್ರದೇಶದ ವೈವಿಧ್ಯತೆಯನ್ನು ಕೇಂದ್ರ ಮತ್ತು ಮಣಿಪುರ ಸರ್ಕಾರ ಗೌರವಿಸಬೇಕು
-ಇರೋಮ್ ಶರ್ಮಿಳಾ ಮಾನವ ಹಕ್ಕುಗಳ ಹೋರಾಟಗಾರ್ತಿ
ದೌರ್ಜನ್ಯ ಪರಿಶೀಲಿಸಲು ಸಮಿತಿ ರಚನೆ
ಇಬ್ಬರು ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳು ದೌರ್ಜನ್ಯ ನಡೆಸಿವೆ ಎಂಬ ದೂರುಗಳನ್ನು ಪರಿಶೀಲಿಸಲು ಮಣಿಪುರ ಸರ್ಕಾರ ಗುರುವಾರ ಸಮಿತಿ ರಚಿಸಿದೆ. 'ಇಂಫಾಲ್‌ನಲ್ಲಿ ಕೆಲ ದಿನಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತಾಪಡೆಗಳು ದೌರ್ಜನ್ಯ ಎಸಗಿವೆ ಎಂಬ ವಿವಿಧ ವರದಿಗಳು/ಆರೋಪಗಳು ಬಂದಿವೆ' ಎಂದು ಡಿಜಿಪಿ ನೀಡಿದ ಆದೇಶ ತಿಳಿಸಿದೆ. ಐಜಿಪಿ (ಆಡಳಿತ) ಕೆ. ಜಯಂತ ನೇತೃತ್ವದಲ್ಲಿ ಸಮಿತಿಯ ನೇತೃತ್ವ ವಹಿಸುವರು. ಸಮಿತಿಯು ವರದಿಯನ್ನು ಆದಷ್ಟು ಶೀಘ್ರ ಸಲ್ಲಿಸಲಿದೆ ಎಂದು ಹೇಳಿದೆ.