ಕಾಸರಗೋಡು: ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಕಾರ್ಯಗಳು ಮುಕ್ತಾಯದ ಹಂತದಲ್ಲಿದ್ದು, ಬ್ರಹ್ಮಕಲಶೋತ್ಸವ ಸಮಿತಿಯ ರೂಪೀಕರಣಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಊರ ಪರವೂರ ಭಕ್ತ ಜನರ ಸಭೆ ನಡೆಯಿತು.
ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್.ಮುರಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ನವೀಕರಣ ಸಮಿತಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಕ್ಷೇತ್ರ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಕ್ಷೇತ್ರದ ಪ್ರಧಾನ ಅರ್ಚಕ ವಿ.ಶ್ರೀಕೃಷ್ಣ ಉಪಾಧ್ಯಾಯ, ಮಾಯಿಪ್ಪಾಡಿ ರಾಜ ಮನೆತನದ ಪ್ರತಿನಿಧಿ ರಾಜೇಂದ್ರ, ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ನವೀಕರಣ ಸಮಿತಿಯ ಪದಾಧಿಕಾರಿಗಳು, ಎಂಟು ಮನೆಯ ಪ್ರತಿನಿಧಿಗಳು, ವಿವಿಧ ವಲಯ ಸಮಿತಿಗಳ ಪದಾಧಿಕಾರಿಗಳು, ನಾಲ್ಕು ಗುತ್ತಿನವರು ಉಪಸ್ಥಿತರಿದ್ದರು. ಊರಪರವೂರ ಭಕ್ತ ಜನರ ಸಮ್ಮುಖದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಹಾಗು ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಮುಂದಿನ ಸಭೆಯಲ್ಲಿ ವಿಪುಲವಾದ ಸಮಿತಿಯನ್ನು ರೂಪೀಕರಿಸುವರೇ ತೀರ್ಮಾನಿಸಲಾಯಿತು.
ಮಲಬಾರ್ ದೇವಸ್ವಂ ಬೋರ್ಡ್ ಸಹಾಯಕ ಆಯುಕ್ತ ಪ್ರದೀಪ್ ಸ್ವಾಗತಿಸಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ಸಿ.ಕೃಷ್ಣರಾಜ ವರ್ಮ ವಂದಿಸಿದರು.