ನವದೆಹಲಿ: ಪ್ರತಿಬಾರಿ ಒಂದಲ್ಲ ಒಂದು ವಿಚಾರಗಳಿಂದ ದೆಹಲಿ ಮೆಟ್ರೋ ವ್ಯಾಪಕವಾಗಿ ಸುದ್ದಿಯಲ್ಲಿರುತ್ತದೆ. ಈ ಸಂಗತಿ ನೆಟ್ಟಿಗರಿಗೆ ಮತ್ತು ದೆಹಲಿ ಮೆಟ್ರೋ ಪ್ರಯಾಣಿಕರಿಗೆ ತೀರ ಸಾಮಾನ್ಯ ವಿಷಯವಾಗಿ ಪರಿವರ್ತಿಸಿದೆ. ಇದೀಗ ಮತ್ತೊಂದು ವೈರಲ್ ವಿಡಿಯೋ ಮೂಲಕ ಡಿಎಂಆರ್‌ಸಿ ಸುದ್ದಿಗೆ ಬಂದಿದ್ದು, ವೃದ್ಧರೊಬ್ಬರು ಬೀಡಿ ಸೇದುತ್ತಿರುವ ದೃಶ್ಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಾಕಷ್ಟು ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಮೆಟ್ರೋ ಒಳಗೆ ವೃದ್ಧರೊಬ್ಬರು ಜೇಬಿನಿಂದ ತೆಗೆದ ಬೀಡಿಗೆ ಬೆಂಕಿ ಹಚ್ಚಿ ಸೇದುತ್ತಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ನಡೆದ ನಿಖರವಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ವಯೋವೃದ್ಧರು ತಮ್ಮ ಜೇಬಿನಿಂದ ಬೀಡಿಯನ್ನು ಹಚ್ಚಿಕೊಂಡು, ಸಾರ್ವಜನಿಕರಿದ್ದ ಮೆಟ್ರೋದೊಳಗೆ ಹೊಗೆ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಇತರ ಸಹ ಪ್ರಯಾಣಿಕರು, ವ್ಯಕ್ತಿಗೆ ಈ ರೀತಿ ಮಾಡದಂತೆ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವೃದ್ಧ, ನನ್ನ ಬಳಿ ಟಿಕೆಟ್ ಇದೆ ಎಂದು ಉತ್ತರಿಸಿದ್ದಾರೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ದೆಹಲಿ ಮೆಟ್ರೋ ರೈಲು ನಿಗಮ ಮತ್ತು ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಘಟನೆಗೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ಡಿಎಂಆರ್‌ಸಿ ಮತ್ತು ಇತರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಮುಂದಾಗಿಲ್ಲ,