ಕುಂಬಳೆ: ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಕುಖ್ಯಾತಿ ಪಡೆದಿರುವ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿ ಕ್ರೀಡಾಕೂಟದ ಮಧ್ಯೆ ಮತ್ತೆ ಘರ್ಷಣೆ ತಲೆದೋರಿದೆ. ವಿದ್ಯಾರ್ಥಿಗಳ ಕ್ರೀಡಾಕೂಟದ ಮಧ್ಯೆ ಹೊರಗಿಂದ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಘರ್ಷಣೆಗೆ ತಿರುಗಿದೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲಿಸರು ಲಘು ಲಾಟಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಕೆಲವು ವಿದ್ಯಾರ್ಥಿಗಳು ಅಂಗಡಿ, ವ್ಯಾಪಾರಿ ಸಂಸ್ಥೆಗಳಿಗೆ ನುಗ್ಗಿ ಪೊಲೀಸರ ಲಾಟಿಪ್ರಹಾರದಿಂದ ತಪ್ಪಿಸಿಕೊಂಡಿದ್ದಾರೆ. ಶಾಲೆಯಲ್ಲಿ ಕಳೆದ ಹಲವು ಸಮಯದಿಂದ ಕ್ಷುಲ್ಲಕ ಕಾರಣಗಳಿಗಾಗಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ಭುಗಿಲೇಳುತ್ತಿದ್ದು, ಇದು ಪೇಟೆಯಲ್ಲಿ ಗುಂಪುಸೇರಿ ಹೊಡೆದಾಡುವ ವರೆಗೂ ಮುಮದುವರಿಯುತ್ತಿದೆ. ದೀರ್ಘ ಕಾಲದಿಂದ ಈ ಸಮಸ್ಯೆ ತಲೆದೋರಿದ್ದರೂ, ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಲ್ಲಿ ಶಾಲಾ ಶಿಕ್ಷಕ ವೃಂದ, ಪಿಟಿಎ ಮುಂದಾಗುತ್ತಿಲ್ಲ ಎಂಬುದಾಗಿ ವಿದ್ಯಾರ್ಥಿಗಳ ಹೆತ್ತವರು ದೂರಿದ್ದಾರೆ.