ಚೆನ್ನೈ: ಬಿಸ್ಕೆಟ್ ಪ್ಯಾಕೆಟ್ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಇದ್ದ ಕಾರಣಕ್ಕೆ ಐಟಿಸಿ ಕಂಪನಿಯು 1 ಲಕ್ಷ ರೂಪಾಯಿ ಗ್ರಾಹಕನಿಗೆ ಪರಿಹಾರವಾಗಿ ನೀಡಬೇಕಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ನಿವಾಸಿ ಮಾಥುರ್ ಕೆಪಿ ದಿಲಿಬಾಬು ಬೀದಿ ನಾಯಿಗಳಿಗೆ ಆಹಾರಕ್ಕಾಗಿ ಡಿಸೆಂಬರ್ 2021ರಲ್ಲಿ ಮನಾಲಿಯ ಸಾಮಾನ್ಯ ಅಂಗಡಿಯಿಂದ ಸನ್‌ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್‌ಗಳ ಡಜನ್ ಪ್ಯಾಕೆಟ್‌ಗಳನ್ನು ಖರೀದಿಸಿದ್ದರು. ಪ್ಯಾಕೆಟ್ ಮೇಲೆ 16 ಬಿಸ್ಕೆಟ್ಗಳಿವೆ ಎಂದು ನಮೂದಿಸಲಾಗಿದ್ದು, ವಾಸ್ತವವಾಗಿ 15 ಬಿಸ್ಕೆಟ್‌ಗಳಿದ್ದವು. ಈ ಬಗ್ಗೆ ದಿಲಿಬಾಬು ಐಟಿಸಿಯಿಂದ ವಿವರಣೆ ಕೇಳಿದ್ದು ಅವರಿಗೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.
ಈ ಸಂಬಂಧ ದಿಲಿಬಾಬು, ಒಂದು ಬಿಸ್ಕೆಟ್ ಬೆಲೆ 75 ಪೈಸೆ. ಐಟಿಸಿ ಲಿಮಿಟೆಡ್ ಒಂದು ದಿನದಲ್ಲಿ ಸುಮಾರು 50 ಲಕ್ಷ ಪ್ಯಾಕ್ಗಳನ್ನು ತಯಾರಿಸುತ್ತದೆ. ಅಂದರೆ ಪ್ರತಿನಿತ್ಯ ಜನರಿಗೆ 29 ಲಕ್ಷ ರೂಪಾಯಿ ವಂಚನೆ ಮಾಡುತ್ತಿದೆ ಎಂದು ಗ್ರಾಹಕ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ಈ ಬಗ್ಗೆ ಕಂಪನಿಯು ತನ್ನ ಪರವನ್ನು ಮಂಡಿಸಿದ್ದು, ದಿಲಿಬಾಬು ಖರೀದಿಸಿದ ಉತ್ಪನ್ನವನ್ನು ತೂಕದ ಆಧಾರದ ಮೇಲೆ ಮಾರಾಟ ಮಾಡಲಾಗಿದೆ. ಜಾಹೀರಾತಿನಲ್ಲಿರುವ ಬಿಸ್ಕೆಟ್ ತೂಕ 76 ಗ್ರಾಂ ಎಂದು ಕಂಪನಿಯ ವಾದಿಸಿತ್ತು. ಕಂಪನಿಯ ಹಕ್ಕನ್ನು ಕೂಡ ಗ್ರಾಹಕ ಹಕ್ಕುಗಳ ಆಯೋಗವು ತನಿಖೆ ಮಾಡಿದ್ದು, ಆದರೆ ಅದರಲ್ಲಿ ಸತ್ಯಾಂಶವಿರಲಿಲ್ಲ. ಅಲ್ಲದೇ ಈ 15 ಬಿಸ್ಕತ್ತುಗಳ ತೂಕವು 74 ಗ್ರಾಂ. ಇತ್ತು.
2011ರ ಕಾನೂನಿನ ಪ್ರಕಾರ, ಪ್ಯಾಕ್ ಮಾಡಿದ ಸರಕುಗಳ ತೂಕವು ಸ್ವಲ್ಪ ಬದಲಾಗಬಹುದು. 4.5 ಗ್ರಾಂ ತೂಕದ ವ್ಯತ್ಯಾಸವನ್ನು ಅನುಮತಿಸಲಾಗಿದೆ ಎಂದು ಕಂಪನಿಯ ವಕೀಲರು ಹೇಳಿದ್ದು, ಗ್ರಾಹಕ ಆಯೋಗವು ಇದನ್ನು ತಿರಸ್ಕರಿಸಿದೆ. ಅಂತಹ ರಿಯಾಯಿತಿಯು ಕೆಲವು ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ಬಿಸ್ಕತ್‌ನಂತಹ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ ಆಯೋಗವು ಗ್ರಾಹಕರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.