ತಿರುವಂತನಪುರ: ಕರುವನ್ನೂರು ಸಹಕಾರಿ ಬ್ಯಾಂಕ್‌ನ ಹಗರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ಸಿಪಿಎಂನ ಸ್ಥಳೀಯ ನಾಯಕರೊಬ್ಬರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ವಶಕ್ಕೆ ಪಡೆದಿದೆ.
ತಿರುವಂತನಪುರ: ಕರುವನ್ನೂರು ಸಹಕಾರಿ ಬ್ಯಾಂಕ್‌ನ ಹಗರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ಸಿಪಿಎಂನ ಸ್ಥಳೀಯ ನಾಯಕರೊಬ್ಬರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ವಶಕ್ಕೆ ಪಡೆದಿದೆ.
ವಡಕ್ಕಂಚೇರಿ ಪುರಸಭೆಯ ಸಿಪಿಐನ ಸದಸ್ಯ ಪಿ.ಆರ್.ಅರವಿಂದಾಕ್ಷನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು, ಕೊಚ್ಚಿಯಲ್ಲಿನ ತನ್ನ ಕಚೇರಿಗೆ ಕರೆತಂದಿದೆ. ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ.
'ಕರುವನ್ನೂರು ಸಹಕಾರಿ ಬ್ಯಾಂಕ್‌ನ ಹಗರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ಮುಖಂಡರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಇ.ಡಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ನಾನು ಈ ಹಿಂದೆ ದೂರು ದಾಖಲಿಸಿದ್ದಕ್ಕೆ ಪ್ರತೀಕಾರವಾಗಿ, ನನ್ನ ವಿರುದ್ಧ ಸುಳ್ಳಿನ ಪ್ರಕರಣ ದಾಖಲಿಸಲಾಗುತ್ತಿದೆ' ಎಂದು ಅರವಿಂದಾಕ್ಷನ್ ವರದಿಗಾರರಿಗೆ ತಿಳಿಸಿದರು.
ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರ ಬ್ಯಾಂಕ್‌ನಲ್ಲಿ ನಕಲಿ ಸಾಲ ಖಾತೆಗಳನ್ನು ತೆರೆಯುವ ಮೂಲಕ ಅಂದಾಜು ₹ 500 ಕೋಟಿಯ ವಂಚನೆ ನಡೆದಿದೆ ಎಂದು ಶಂಕಿಸಲಾಗಿದೆ. ಮಾಜಿ ಸಚಿವ ಎ.ಸಿ.ಮೊಯಿದ್ದೀನ್ ಸೇರಿದಂತೆ ಹಲವು ಮುಖಂಡರ ಪಾತ್ರವಿರುವ ಬಗ್ಗೆ ಇ.ಡಿ ತನಿಖೆ ನಡೆಸಿದೆ.
ಜಾರಿ ನಿರ್ದೇಶನಾಲಯದ ಈ ಕ್ರಮವು 'ವಿರೋಧ ಪಕ್ಷಗಳ ವಿರುದ್ಧ ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಳ್ಳುವ ಬಿಜೆಪಿ ಕಾರ್ಯಸೂಚಿಯ ಭಾಗವಾಗಿದೆ' ಎಂದು ಸಿಪಿಎಂ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಪುನರುಚ್ಚರಿಸಿದ್ದಾರೆ.