ತ್ರಿಶೂರ್: ಕರುವನ್ನೂರ್ ಸಹಕಾರಿ ಬ್ಯಾಂಕ್ ವಂಚನೆ ಬಳಿಕ ಜಿಲ್ಲೆಯಲ್ಲಿ ಮತ್ತೊಂದು ವಂಚನೆ ವರದಿಯಾಗಿದೆ. ಸಂಪೂರ್ಣ ಕಾಂಗ್ರೆಸ್ ಹಿಡಿತದಲ್ಲಿರುವ ಕುನ್ನಂಕುಳಂ ಕಟ್ಟಕಂಬಲ್ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ವಂಚನೆ ನಡೆದಿದೆ.
ಸಹಕಾರಿ ಬ್ಯಾಂಕ್‍ನ ಆಡಳಿತ ಸಮಿತಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‍ನ ಸ್ಥಳೀಯ ಮುಖಂಡ ವಿ.ಆರ್.ಸಜಿತ್ ವಿರುದ್ಧ ದೂರು ದಾಖಲಾಗಿದೆ.
ಅಂಗನವಾಡಿ ಶಿಕ್ಷಕಿ ಪ್ರಮೀಳಾ ಸುಕುಮಾರನ್ ಅವರಿಗೆ ಒಂಬತ್ತು ಲಕ್ಷ ರೂಪಾಯಿ ಸಾಲ ಬಾಕಿ ಇದೆ ಎಂದು ನೋಟಿಸ್ ಬಂದಾಗ ವಂಚನೆಯ ಮಾಹಿತಿ ಬೆಳಕಿಗೆ ಬಂದಿದೆ.
ಪ್ರಮೀಳಾ ಹತ್ತು ವರ್ಷಗಳಿಂದ ಸಹಕಾರಿ ಬ್ಯಾಂಕ್‍ನಲ್ಲಿ ಸಾಲ ಪಡೆದಿರಲಿಲ್ಲ. ನೋಟಿಸ್ ಬಂದ ನಂತರ ಬ್ಯಾಂಕ್‍ಗೆ ಬಂದು ವಿಚಾರಿಸಿದ್ದಾರೆ. ಅಂಗನವಾಡಿಗೆ ಜಮೀನು ಖರೀದಿಗೆ ಸಾಲ ಪಡೆಯಲು ಪ್ರಮೀಳಾ ಸಂಬಳದ ಚೀಟಿಯನ್ನು ಬ್ಯಾಂಕ್‍ಗೆ ನೀಡಿದ್ದರು. ಸಾಲ ಸಿಗುವುದಿಲ್ಲ ಎಂದು ಬ್ಯಾಂಕ್ ತಿಳಿಸಿದ್ದರೂ ಸಂಬಳದ ದಾಖಲೆ ವಾಪಸ್ ನೀಡಿರಲಿಲ್ಲ. ಶಿಕ್ಷಕರ ಸಂಬಳದ ಚೀಟಿಯನ್ನು ಬಳಸಿಕೊಂಡು ಸಜಿತ್ ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದ.
ಅಂಗನವಾಡಿಯಿಂದ ಬರುವ ಸಂಬಳವೇ ಕುಟುಂಬದ ಆದಾಯ. ಅಷ್ಟು ಮೊತ್ತವನ್ನು ಮರುಪಾವತಿಸಲು ಪ್ರಮೀಳಾಗೆ ಸಾಧ್ಯವಾಗುತ್ತಿಲ್ಲ. ಸಜಿತ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪ್ರಮೀಳಾ ತಿಳಿಸಿದ್ದಾರೆ. ಸಹಕಾರಿ ಸಹಾಯಕ ನಿಬಂಧಕರ ದೂರಿನ ಮೇರೆಗೆ ಕುನ್ನಂಕುಳಂ ಪೋಲೀಸರು ಸಜಿತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್‍ನ ಪಂಚಾಯತ್ ಸದಸ್ಯರೂ ಆಗಿರುವ ಸಜಿತ್ ಅವರು ದೂರು ನೀಡಿದ ನಂತರ ಈಗ ತಲೆಮರೆಸಿಕೊಂಡಿದ್ದಾರೆ.