ಕಾಸರಗೋಡು: ನೀಲಾಕಾಶಕ್ಕಾಗಿ ಅಂತಾರಾಷ್ಟ್ರೀಯ ಸ್ವಚ್ಛ ಗಾಳಿ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಉದುಮ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಜರುಗಿತು. ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಸಮಾರಂಭ ಉದ್ಘಾಟಿಸಿದರು.
ಉದುಮ ಕಲಾ ಮತ್ತು ವಿಜ್ಞಾನ ಕಾಲೇಜು ಉಪ ಪ್ರಾಂಶುಪಾಲ ಟಿ.ವಿನಯನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯೆ ರೀಜಾ ಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುಧಾಮೋಳ್ ವಂದಿಸಿದರು. ಜಾಗೃತಿ ವಿಚಾರ ಸಂಕಿರಣದಲ್ಲಿ ಕಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಬಾಸಿಲ್ ವರ್ಗೀಸ್ ತರಗತಿ ನಡೆಸಿ ಮಾತನಾಡಿ, ಮಾನವರಂತೆ, ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಶುದ್ಧ ಗಾಳಿ ಬೇಕು. 19 ನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾದ ಕೈಗಾರಿಕೀಕರಣದ ಪರಿಣಾಮವಾಗಿ, ಭೂಮಿಯ ಮೇಲಿನ ಗಾಳಿಯು ದಿನ ಕಳೆದಂತೆ ಕಲುಷಿತವಾಗುತ್ತಿದೆ. ಇದರಿಂದ ಜನರ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚಾಗತೊಡಗಿದೆ ಜತೆಗೆ ಭೂಮಿಯ ಸಮತೋಲನವೂ ತಪ್ಪಿದೆ. 2020 ರಲ್ಲಿ ಮೊದಲ ಬಾರಿಗೆ ಕ್ಲೀನ್ ಏರ್ ದಿನವನ್ನು ಆಚರಿಸಲಾಗಿದೆ. 2030ರ ವೇಳೆಗೆ ಭೂಮಿಯ ನೀರು, ಗಾಳಿ ಮತ್ತು ಮಣ್ಣು ಬಹುತೇಕ ಕಲುಷಿತಗೊಳ್ಳಲಿದೆ. ಈ ಅಪಾಯಕಾರಿ ಗಾಳಿಯಿಂದ ಭೂಮಿಯನ್ನು ಉಳಿಸಿ ಗುಣಮಟ್ಟವನ್ನು ಸುಧಾರಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಉದುಮ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಎನ್ನೆಸ್ಸೆಸ್ ಘಟಕದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.