ಕಾಸರಗೋಡು: ನೆಲ್ಲಿಕುಂಜೆ ಬಳಿ ರೈಲ್ವೆ ಹಳಿಯಲ್ಲಿ ಕಲ್ಲನ್ನಿರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸನಿಹದ ಮನೆಯ ಇಬ್ಬರು ಮಕ್ಕಳನ್ನು ಅವರ ಹೆತ್ತವರೊಂದಿಗೆ ಠಾಣೆಗೆ ಕರೆಸಿದ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಈ ಇಬ್ಬರು ವಿದ್ಯಾರ್ಥಿಗಳು ರೈಲ್ವೆ ಹಳಿಯಲ್ಲಿ ಕಲ್ಲಿರಿಸಿರುವ ಬಗ್ಗೆ ಪೊಲೀಸರಿಗೆ ಮಹಿತಿ ಲಭಿಸಿತ್ತು. ರೈಲ್ವೆ ಹಳಿಯ ಸನಿಹದ ಮನೆಯೊಂದರಲ್ಲಿ ಸಮಾರಂಭ ನಡೆದಿದ್ದು, ಈ ಸಂದರ್ಭ ಮಕ್ಕಳಿಬ್ಬರು ರೈಲ್ವೆ ಹಳಿಯಲ್ಲಿ ಸುತ್ತಾಡುತ್ತಿರುವುದನ್ನು ಇಲ್ಲಿನ ವ್ಯಕ್ತಿಯೊಬ್ಬರು ಕಂಡಿದ್ದರೆನ್ನಲಾಗಿದೆ. ಇವರು ನೀಡಿದ ಮಾಹಿತಿಯನ್ವಯ ಸಮಾರಂಭ ನಡೆಯುತ್ತಿದ್ದ ಮನೆಯ ವಿಡಿಯೋ ದೃಶ್ಯಾವಳಿ ತಪಾಸಣೆ ನಡೆಸಿದಾಗ ಮಕ್ಕಳಿಬ್ಬರನ್ನು ಗುರುತಿಸಲಾಗಿತ್ತು. ಇಬ್ಬರೂ ಸೇರಿ ಕಲ್ಲಿರಿಸಿರುವ ಬಗ್ಗೆ ಮಕ್ಕಳು ಮಾಹಿತಿ ನೀಡಿದ್ದರು. ನಂತರ ಇವರ ಹೆತ್ತವರನ್ನು ಠಾಣೆಗೆ ಕರೆಸಿ, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
ಮಂಗಳೂರು-ಚೆನ್ನೈ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲು ಹಾದುಹೋದ ನಂತರ ಕಲ್ಲು ಪುಡಿಯಾಗಿ ಕಂಡುಬಂದಿದ್ದು, ಹಳಿಯಲ್ಲಿರಿಸಿರುವುದು ಸಣ್ಣ ಕಲ್ಲುಗಳಾಗಿರುವುದರಿಂದ ಅಪಾಯವಿಲ್ಲದೆ ರೈಲು ಮುಂದಕ್ಕೆ ಸಾಗಿತ್ತು. ಕಲ್ಲಿನ ಮೇಲಿಂದ ರೈಲು ಸಾಗುತ್ತಿದ್ದಂತೆ ವಿಶೇಷ ರೀತಿಯ ಅಲುಗಾಟದ ಅನುಭವವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.