ಉಪ್ಪಳ: ಹತ್ತನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿರುವ ಕಲಿಕೆದಾರರಿಗಾಗಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಅನುಷ್ಠಾನಕ್ಕೆ ತಂದಿರುವ ಹತ್ತನೇ ಸಮತ್ವ ತರಗತಿಯ ಪರೀಕ್ಷೆ ರಾಜ್ಯದಾದ್ಯಂತ ಆರಂಭಗೊಂಡಿದೆ.
ಏಳನೇ ತರಗತಿ ಕಳೆದು ಎಸ್ಸಸೆಲ್ಸಿ ಪರೀಕ್ಷೆ ಬರೆಯಲಾಗದವರಿಗೆ ಜಿಲ್ಲಾ ಸಾಕ್ಷರತಾ ಮಿಷನಿನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲೂ 2022-23ನೇ ವರ್ಷದ ಹತ್ತನೇ ಸಮತ್ವ ಪರೀಕ್ಷೆ ಕನ್ನಡ ಹಾಗೂ ಮಲೆಯಾಳ ಭಾಷೆಯಲ್ಲಿ ನಡೆಸಲಾಗುತ್ತಿದೆ. ವಿವಿಧ ಪಂಚಾಯಿತಿಯ ಕಲಿಕೆದಾರರನ್ನು ಬ್ಲೋಕ್ ಮಟ್ಟದಲ್ಲಿ ವಿಭಜಿಸಿಕೊಂಡು ಆಯಾ ಮಾಧ್ಯಮಕ್ಕೆ ಪ್ರಾಧಾನ್ಯತೆ ಕಲ್ಪಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಕನ್ನಡ ಮಾಧ್ಯಮ ಕಲಿಕೆದಾರರ ಪರೀಕ್ಷೆ ಪೈವಳಿಕೆ ನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು. ಈ ಕೇಂದ್ರದಲ್ಲಿ 123 ಮಂದಿ ಕಲಿಕಾದಾರರು ಪರೀಕ್ಷೆಗೆ ಹಾಜರಾಗಿದ್ದಾರೆ. ಎಣ್ಮಕಜೆ, ಪುತ್ತಿಗೆ ಪಂಚಾಯತಿನ ಕಲಿಕೆದಾರರು ಎಸ್.ಎನ್.ಎಚ್ ಪೆರ್ಲ, ಪೈವಳಿಕೆಯ ಜಿಎಚ್‍ಎಸ್ ಪೈವಳಿಕೆ ನಗರ ಮತ್ತು ಎಸ್.ಎ.ಟಿ. ಮಂಜೇಶ್ವರದ ಕಲಿಕಾ ಕೇಂದ್ರಗಳಲ್ಲಿ ಅಭ್ಯಸಿಸಿರುವ ಕಲಿಕೆದಾರರು ಪೈವಳಿಕೆ ನಗರ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
17 ವರ್ಷ ಪ್ರಾಯದಿಂದ ಮೇಲ್ಪಟ್ಟು 58 ವರ್ಷ ಪ್ರಾಯದ ವರೆಗಿನ ಕಲಿಕಾದಾರರು ಇವರಲ್ಲಿ ಒಳಗೊಂಡಿದ್ದಾರೆ. ಪೈವಳಿಕೆ ನಗರ ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಮಾಸ್ಟರ್ ಹಿರಿಯ ಮೇಲ್ವಿಚಾರಕ ಹಾಗೂ ವತ್ಸಲ ಜೆ.ಎಸ್.ಸಹಾಯಕ ಮೇಲ್ವಿಚಾರಕರಾಗಿ ಪರೀಕ್ಷೆ ನಡೆಸಿಕೊಡುತ್ತಿದ್ದಾರೆ. ಎಣ್ಮಕಜೆ ಪಂಚಾಯಿತಿಯ ಸೆಂಟರ್ ಕೋರ್ಡಿನೇಟರ್ ಆನಂದ ಕುಕ್ಕಿಲ, ಪೈವಳಿಕೆ ಪಂಚಾಯಿತಿಯ ವಿಶ್ವನಾಥ್, ಮಂಜೇಶ್ವರ ಪಂಯಿತಿಯ ಕೋರ್ಡಿನೇಟರ್ ಶೋಭಾ, ಪೈವಳಿಕೆ ನಗರ ಶಾಲಾ ಪಿಟಿಎ ಅಧ್ಯಕ್ಷ ರಮೇಶ್ ಪರೀಕ್ಷೆಯ ನಿರ್ವಹಣೆಗೆ ಸಹಕರಿಸಿದರು. ಸೆಪ್ಟಂಬರ್ 20ರ ವರೆಗೆ ಹತ್ತನೇ ಸಮತ್ವ ಪರೀಕ್ಷೆ ನಡೆಯಲಿದೆ.