ಅಯೋಧ್ಯೆ: ಇಲ್ಲಿನ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ದೇವಸ್ಥಾನದ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಮೊದಲ ಮಹಡಿಯ ನಿರ್ಮಾಣದ ಚಿತ್ರಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಗಲು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು.
2024ರ ಜ. 14ರಿಂದ 24ರೊಳಗೆ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ ಎಂದೆನ್ನಲಾಗಿದೆ. ಜ. 14ರಿಂದ ಪೂಜಾ ಕಾರ್ಯಗಳು ಆರಂಭವಾಗಲಿವೆ.
ಪ್ರಾಣ ಪತ್ರಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವಂತೆ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರು ಈಗಾಗಲೇ ಪತ್ರ ಬರೆದಿದ್ದಾರೆ. ಪ್ರಧಾನಿಯವರೊಂದಿಗೆ ಇತರ ಪ್ರಸಿದ್ಧ ವ್ಯಕ್ತಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 136 ಸನಾತನ ಸಂಪ್ರದಾಯದ ಸುಮಾರು 25 ಸಾವಿರಕ್ಕೂ ಅಧಿಕ ಹಿಂದೂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.
ದೇಗುಲದೊಳಗಿನ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಟ್ರಸ್ಟ್ ಹೇಳಿದೆ. ದೇವಾಲಯದ ಹೊರ ಭಾಗದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬರಲಿರುವ ಭಕ್ತರಿಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಪ್ರತಿಷ್ಠಾಪನೆಗೂ ಪೂರ್ವದಲ್ಲಿ 30 ದಿನಗಳ ಕಾಲ ಸಂತರು ಮತ್ತು ಭಕ್ತರು ಸೇರಿ ಒಂದು ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಗಿದೆ ಎಂದು ಟ್ರಸ್ಟ್ ಹೇಳಿದೆ.
2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಆಧರಿಸಿ ಸರ್ಕಾರ ರಚಿಸಿದ ಟ್ರಸ್ಟ್ ಈ ದೇಗುಲವನ್ನು ನಿರ್ಮಿಸುತ್ತಿದೆ. 67.3 ಎಕರೆ ಜಾಗದಲ್ಲಿ 450 ವರ್ಷಗಳ ಹಿಂದೆ ನಿರ್ಮಿಸಿದ ಮಸೀದಿಯನ್ನು ಹಾಗೇ ಉಳಿಸಿಕೊಳ್ಳಬೇಕು ಎಂಬ ಮುಸ್ಲಿಂ ಸಮುದಾಯದ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು. ದೇವಸ್ಥಾನದ ಸುತ್ತ ಸಾರ್ವಜನಿಕ ಬಳಕೆಗಾಗಿ 71 ಎಕರೆ ಜಾಗವನ್ನು ಟ್ರಸ್ಟ್ ಈಗಾಗಲೇ ವಶಕ್ಕೆ ಪಡೆದಿದೆ. ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಿಗೆ ಸಾರ್ವಜನಿಕ ದೇಣಿಗೆ ರೂಪದಲ್ಲಿ ₹3500 ಕೋಟಿ ಸಂಗ್ರಹಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.