ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕದಲ್ಲಿ ಶಾಲಾ ಬಸ್-ಆಟೋ ಡಿಕ್ಕಿಯಾಗಿ ಮೃತಪಟ್ಟ ಐದೂ ಮಂದಿಯ ಮೃತದೇಹಗಳ ಶವಮಹಜರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರಾತ್ರಿಯಿಂದ ಬೆಳಗಿನ ವರೆಗೂ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಆಟೋ ಚಾಲಕ ಎ.ಎಸ್. ಅಬ್ದುಲ್ ರಾವೂಫ್ ಅವರ ಮೃತದೇಹ ಕಾಸರಗೋಡು ತಾಯಲಂಗಾಡಿಯ ಖಿಲಾರ್ ಜುಮಾ ಮಸೀದಿ ಪ್ರಾಂಗಣದಲ್ಲಿ ದಫನ ಮಾಡಲಾಯಿತು.
ಬೀಫಾತಿಮ್ಮ ಅವರ ಮೃತದೇಹ ಮೊಗರ್ ಜುಮಾ ಮಸೀದಿ ಪ್ರಾಂಗಣ, ಉಮ್ಮಾಲಿಮ್ಮ ಅವರ ಮೃತದೇಹ ಮೊಗ್ರಾಲ್‍ಪುತ್ತೂರು ಟೌನ್ ಜುಮಾ ಮಸೀದ ಪ್ರಾಂಗಣ, ನಫೀಸಾ ಅವರ ಮೃತದೇಃ ಬೆಳ್ಳೂರು ಜುಮಾ ಮಸೀದಿ ಅಂಗಣ, ದಿಡುಪೆ ನಿವಸಿ ಬೀಫಾತಿಮ್ಮ ಅವರ ಮೃತದೇಹವನ್ನು ಕೋಟಕುನ್ನು ಜುಮಾ ಮಸೀದಿ ಅಂಗಣದಲ್ಲಿ ದಫನ ಮಾಡಲಾಯಿತು.
ಮೃತದೆಗಳ ಶವಮಹಜರು ತಪಾಸಣೆ ಮಂಗಳವಾರ ಆರಂಭಿಸಲು ತೀರ್ಮಾನಿಸಿದ್ದರೂ, ಶಾಸಕರಾದ ಎನ್.ಎ ನೆಲ್ಲಿಕುನ್ನು ಹಾಗೂ ಎ.ಕೆ.ಎಂ ಅಶ್ರಫ್ ಅವರ ಮಧ್ಯಪ್ರವೇಶದಿಂದ ರಾತ್ರಿ ಬೆಳಗಾಗುವುದರೊಳಗೆ ಪೂರ್ತಿಗೊಳಿಸಲಾಗಿತ್ತು.
ಶಾಲಾ ಬಸ್ ಚಾಲಕ ಕುಂಟಿಕಾನ ನಿವಾಸಿ ಜಾನ್ ಡಿ.ಸೋಜ ಯಾನೆ ಜೆರಿ(56)ಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತಕ್ಕೀಡಾದ ರಿಕ್ಷಾ ನಾಲ್ಕು ತಿಂಗಳ ಹಿಂದೆಯಷ್ಟೆ ಅಬ್ದುಲ್ ರಾವೂಫ್ ಖರೀದಿಸಿದ್ದರೆನ್ನಲಾಗಿದೆ.