ತಿರುವನಂತಪುರ: ದುಡ್ಡೊಂದಿದ್ದರೆ ಏನನ್ನಾದರು ಕೊಳ್ಳಬಹುದು ಎಂಬ ಮಾತಿದೆ. ಆ ಮಾತೀಗ ಮತ್ತೊಮ್ಮೆ ಸಾಭೀತಾಗಿದೆ. ಕೇರಳದಲ್ಲಿ ರೂ 34,000 ಕ್ಕೆ ನೀವು ಆರಕ್ಷಕ ಠಾಣೆ , ಪೊಲೀಸ್ ನಾಯಿ, ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬಹುದಾಗಿದೆ.
ದಿನಕ್ಕೆ ರೂ 34,000ಬ ಕೊಟ್ರೆ ಸಾಕು, ನಿಮ್ಮನ್ನು ಕಾಯಲು ವಾಕಿ ಟಾಕಿ ಹಿಡಿದ ಪೊಲೀಸ್ ಸಿಬ್ಬಂದಿ, ಪೊಲೀಸ್ ನಾಯಿ ಎಲ್ಲವೂ ಮನೆ ಮುಂದೆ ರೆಡಿ.
ಕೇರಳದಲ್ಲಿ ಈ ಯೋಜನೆ ಅತ್ಯಂತ ಪ್ರಚಲಿತದಲ್ಲಿದ್ದು ಇದೀಗ ಕಾರ್ಯರೂಪಕ್ಕೆ ತಂದಿರುವ ಯೋಜನೆ ಏನಲ್ಲ. ಅತ್ಯಂತ ಹಳೆಯ ಪದ್ಧತಿಯಾಗಿದ್ದು ಇದರಿಂದಾಗಿ ಆರ್ಥಿಕತೆಯೂ ಸದೃಢವಾಗಲಿದೆ.
ಕೇರಳದ ಸರಕಾರದ ಆದೇಶದ ರೇಟ್ ಕಾರ್ಡ್ ಪ್ರಕಾರ ದಿನವೊಂದಕ್ಕೆ ಒಬ್ಬ ತರಬೇತಿ ಪಡೆದ ಪೊಲೀಸ್ ಅಧಿಕಾರಿಯನ್ನು ನಿಯೋಜಿಸುವುದು ರೂ 3035 ರಿಂದ ರೂ 3,340 ಕೊಡಬೇಕು. ಅದಕ್ಕಿಂತಲೂ ಕಡಿಮೆ ವೆಚ್ಚದ ಯೋಜನೆ ನಿಮಗೆ ಬೇಕಾದಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯನ್ನು ದಿನವೊಂದಕ್ಕೆ ರೂ 610 ನೀಡಿ ನಿಯೋಜಿಸಿಕೊಳ್ಳಬಹುದು.
ದಿನದ ಬಾಡಿಗೆಯಲ್ಲಿ ರೂ 12,000 ಕ್ಕೆ ಪೊಲೀಸ್ ಸ್ಟೇಶನ್ ಅನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಪೊಲೀಸ್ ನಾಯಿಯ ದರ ದಿನಕ್ಕೆ ರೂ 7,280 ಅಂತೆಯೇ ವೈರ್‌ಲೆಸ್ ಪರಿಕರವನ್ನು ಬಾಡಿಗೆಗೆ ದಿನವೊಂದಕ್ಕೆ ರೂ 12,310 ಕ್ಕೆ ನಿಯೋಜಿಸಬಹುದು.
ಪೊಲೀಸ್ ನಾಯಿಯನ್ನು ನಿಯೋಜಿಸಲು ಏಕಿಷ್ಟು ಹೆಚ್ಚಿನ ವೆಚ್ಚ ಎಂಬುದಕ್ಕೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಆದರೆ ಹೀಗೆ ನಿಯೋಜನೆ ಮಾಡಿಕೊಳ್ಳುವವರು ಯಾರು ಎಂಬುದಕ್ಕೆ ಉತ್ತರ ನೀಡುವ ಸರಕಾರ, ಖಾಸಗಿ ಪಾರ್ಟಿಗಳು, ಮನೋರಂಜನಾ ಸ್ಥಳಗಳು, ಫಿಲ್ಮ್ ಶೂಟಿಂಗ್‌ಗಳಲ್ಲಿ ಇಂತಹ ಪೊಲೀಸ್ ನಾಯಿಗಳ ಸೇವೆ ಅಗತ್ಯವಿರುತ್ತದೆ ಎಂದಾಗಿದೆ.ಪೊಲೀಸ್ ಅಧಿಕಾರಿಗಳು ಸರಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾ ಚಿತ್ರೀಕರಣ ಹಾಗೂ ಖಾಸಗಿ ಪಾರ್ಟಿಗಳು ನಡೆಯುವ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳ ಅಗತ್ಯವಿರುವುದಿಲ್ಲ, ಇನ್ನು ಭರ್ಜರಿ ಪಾರ್ಟಿಗಳಲ್ಲಿ ಹೆಚ್ಚುವರಿ ಬಂದೋಬಸ್ತನ್ನು ನಡೆಸಲಾಗುತ್ತದೆ ಹಾಗಾಗಿ ಈ ಯೋಜನೆ ವಿಫಲವಾಗುವುದು ಖಂಡಿತ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.