ಲಂಡನ್: ಪ್ರತಿಷ್ಠಿತ ಬ್ರಿಟಿಷ್ ಅಕಾಡೆಮಿಯ ಬುಕ್ ಪ್ರಶಸ್ತಿಗೆ ಸಿದ್ಧಪಡಿಸಿರುವ ಕಿರು ಪಟ್ಟಿಯಲ್ಲಿ ಭಾರತ ಮೂಲದ ನಂದಿನಿ ದಾಸ್ ಹಾಗೂ ಕ್ರಿಸ್ ಮಂಜಪ್ರ ಸೇರಿದಂತೆ ಒಟ್ಟು ಆರು ಮಂದಿ ಲೇಖಕರು ಸ್ಥಾನ ಪಡೆದಿದ್ದಾರೆ ಎಂದು ತೀರ್ಪುಗಾರರ ಮಂಡಳಿಯ ಮುಖ್ಯಸ್ಥ ಚಾರ್ಲ್ಸ್ ಟ್ರಿಪ್ ಅವರು ಮಂಗಳವಾರ ತಿಳಿಸಿದ್ದಾರೆ.
ಪ್ರಸ್ತುತ, ನಂದಿನಿ ಅವರು ಬ್ರಿಟನ್‌ನಲ್ಲಿ ನೆಲೆಸಿದ್ದರೆ, ಕ್ರಿಸ್ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರಶಸ್ತಿಯು ₹25,85,652 ಮೌಲ್ಯದ್ದಾಗಿದೆ.
ನಂದಿನಿ ಅವರ 'ಕೋರ್ಟಿಂಗ್ ಇಂಡಿಯಾ: ಇಂಗ್ಲೆಂಡ್, ಮೊಘಲ್ ಇಂಡಿಯಾ ಆಯಂಡ್ ದ ಒರಿಜನ್ಸ್ ಆಫ್ ಎಂಪೈರ್' ಮತ್ತು ಮಂಜಪ್ರ ಅವರ 'ಬ್ಲ್ಯಾಕ್ ಘೋಸ್ಟ್ ಆಫ್ ಎಂಪೈರ್: ದ ಲಾಂಗ್ ಡೆತ್ ಆಫ್ ಸ್ಲೇವರಿ ಆಯಂಡ್ ದ ಫೇಲ್ಯೂರ್ ಆಫ್ ಎಮ್ಯಾನ್ಸಿಪೇಶನ್' ಕೃತಿಗಳಿಗೆ ಈ ಮನ್ನಣೆ ದೊರೆತಿದೆ.
ಜಗತ್ತಿನ ವಿವಿಧ ಸಂಸ್ಕೃತಿಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ, ಕಾಲ್ಪನಿಕವಲ್ಲದ ಹಾಗೂ ವಾಸ್ತವದ ನೆಲೆಗಟ್ಟಿನಲ್ಲಿ ರಚಿಸಲಾದ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.