ಹೊಸ ಸಂಸತ್ ಭವನದಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಕುರಿತು ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಕರ್ತವ್ಯ ನಿಭಾಯಿಸಲು ಸೂಕ್ತ ಸಾಮರ್ಥ್ಯ ಹೊಂದಿರದ ಅವಿದ್ಯಾವಂತ ಹಾಗೂ ಧ್ವನಿ ಇಲ್ಲದ ಮಹಿಳೆಯರನ್ನು ಆಯ್ಕೆ ಮಾಡುವ ಸಲುವಾಗಿಯಷ್ಟೇ ರಾಜಕೀಯ ಪಕ್ಷಗಳು ಮೀಸಲಾತಿ ಮಸೂದೆಯನ್ನು ಬಳಸಿಕೊಳ್ಳುತ್ತವೆ ಎಂದು ಆರೋಪಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್, "ಇದು ಹಾರಿಕೆಯ ಹೇಳಿಕೆಗಳಾಗಿವೆ" ಎಂದು ಟೀಕಿಸಿದರು.
"ಪರಿಶಿಷ್ಟ ಜಾತಿಗಳ ಮಹಿಳೆಯ ಸಾಕ್ಷರತೆ ಪ್ರಮಾಣ ಬಹಳ ಕಡಿಮೆ ಇದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುವ ಹವ್ಯಾಸ ಹೊಂದಿವೆ. ಸುಶಿಕ್ಷಿತರು ಮತ್ತು ಹೋರಾಟ ನಡೆಸುವ ಸಾಮರ್ಥ್ಯ ಹೊಂದಿರುವವರನ್ನು ಅವರು ಎಂದಿಗೂ ಆಯ್ಕೆ ಮಾಡುವುದಿಲ್ಲ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಆಡಳಿತ ಪಕ್ಷದ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, "ಅರ್ಧ ಟಿಕೆಟ್ ಏನು? ನಾವು ಮೂರನೇ ಒಂದು ಟಿಕೆಟ್ ಬಗ್ಗೆ ಮಾತನಾಡುತ್ತಿದ್ದೇವೆ. ಸುಮ್ಮನೆ ಕುಳಿತುಕೊಳ್ಳಿ.. ಹಿಂದುಳಿದ, ಪರಿಶಿಷ್ಟ ಜಾತಿ ಜನರನ್ನು ಪಕ್ಷಗಳು ಹೇಗೆ ಆಯ್ಕೆ ಮಾಡುತ್ತವೆ ಎಂಬ ಬಗ್ಗೆ ನನಗೆ ತಿಳಿವಳಿಕೆ ಇದೆ" ಎಂದು ಗದರಿದರು.
ಕಾಂಗ್ರೆಸ್‌ಗೆ ಅನ್ವಯ ಎಂದ ನಿರ್ಮಲಾ:
"ವಿರೋಧ ಪಕ್ಷದ ನಾಯಕರನ್ನು ನಾವು ಗೌರವಿಸುತ್ತೇವೆ. ಆದರೆ ಎಲ್ಲಾ ಪಕ್ಷಗಳೂ ಅಸಮರ್ಥ ಮಹಿಳೆಯರನ್ನು ಆಯ್ಕೆ ಮಾಡುತ್ತವೆ ಎಂಬ ಹಾರಿಕೆಯ ಹೇಳಿಕೆ ನೀಡುವುದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ನಾವೆಲ್ಲರೂ ನಮ್ಮ ಪಕ್ಷದಿಂದ, ನಮ್ಮ ಪ್ರಧಾನಿಯಿಂದ ಸಬಲರಾಗಿದ್ದೇವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಬಲೆ. ನಮ್ಮ ಪಕ್ಷದ ಪ್ರತಿ ಸಂಸದರೂ ಸಬಲರು" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.ಕಾಂಗ್ರೆಸ್ ಮಹಿಳಾ ಅಧ್ಯಕ್ಷರನ್ನು ಹೊಂದಿದ್ದರೂ, ಇಂತಹ ಹಾರಿಕೆ ಹೇಳಿಕೆಗಳು ಆ ಪಕ್ಷಕ್ಕೆ ಮಾತ್ರವೇ ಅನ್ವಯವಾಗುತ್ತದೆ ಎನಿಸುತ್ತದೆ. ಆದರೆ ಎಲ್ಲಾ ಪಕ್ಷಗಳನ್ನೂ ಸಾಮಾನ್ಯೀಕರಿಸಿದ ಅವರ ಹೇಳಿಕೆಗೆ ಆಕ್ಷೇಪವಿದೆ" ಎಂದರು.