ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಸೇನಾಪಡೆಗಳು ಅಮೆರಿಕದ ಅಲಾಸ್ಕಾದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿವೆ.
ಅಲಾಸ್ಕಾದಲ್ಲಿ ಎರಡು ವಾರಗಳ ಕಾಲ ನಡೆಯಲಿರುವ ಜಂಟಿ ಸಮರಾಭ್ಯಾಸದ ಭಾಗವಾಗಿ ಇಂದು (ಶನಿವಾರ) ಸೇನಾಪಡೆಗಳು ಕಸರತ್ತು ನಡೆಸಿವೆ ಎಂದು ಭಾರತೀಯ ಸೇನೆ ತಿಳಿಸಿದೆ.
ಉಭಯ ದೇಶಗಳ ಸೇನಾ ಸಾಮರ್ಥ್ಯ ಬಲಪಡಿಸುವ ಉದ್ದೇಶದಿಂದ ಯುದ್ಧ ಎಂಜಿನಿಯರಿಂಗ್, ಅಡೆತಡೆಗಳ ನಿವಾರಣೆ ಸೇರಿದಂತೆ ವಿವಿಧ ಸೇನಾ ಕೌಶಲಗಳ ವಿನಿಮಯ ಮತ್ತು ಯುದ್ಧ ಸಲಕರಣೆಗಳ ಸಮರ್ಥ ಬಳಕೆ ಕುರಿತಂತೆ ಸೇನಾಪಡೆಗಳು ಅಭ್ಯಾಸ ನಡೆಸುತ್ತಿವೆ.
'ಉಭಯ ದೇಶಗಳ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಭಾಗವಾಗಿ ಜಂಟಿ ತಾಲೀಮು ನಡೆಸಲಾಗುತ್ತಿದೆ. 19ನೇ ಆವೃತ್ತಿಯ ಯುದ್ಧ ಅಭ್ಯಾಸದಲ್ಲಿ ಪಾಲ್ಗೊಳ್ಳಲು 350 ಸೈನಿಕರನ್ನು ಒಳಗೊಂಡ ಭಾರತೀಯ ಸೇನಾಪಡೆಯು ಈಗಾಗಲೇ ಅಲಾಸ್ಕಾದ ಫೋರ್ಟ್ ವೈನ್‌ವ್ರೈಟ್ ತಲುಪಿದೆ' ಎಂದು ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು.
ಇದಕ್ಕೂ ಮೊದಲು ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರಾಖಂಡದ ಔಲಿಯಲ್ಲಿ ಉಭಯ ದೇಶಗಳ ಸೇನಾಪಡೆಗಳು ಜಂಟಿ ತಾಲೀಮು ನಡೆಸಿದ್ದವು.