ಬದಿಯಡ್ಕ: ವ್ಯಕ್ತಿಯಾಗಿ ಸಂಘಟನೆಯನ್ನು ಕಟ್ಟಿ, ಕಲೆ-ಕಲಾವಿದರಿಗೆ ನೆರವಾಗುವ ಚಿಂತನೆ ಶ್ಲಾಘನೀಯ. ಪಟ್ಲ ಪೌಂಡೇಶನ್ ಮೂಲಕ ಜನಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಎಡನೀರು ಮಠದಲ್ಲಿ 3ನೇ ಚಾತುರ್ಮಾಸ್ಯ ವ್ರತಾಚರಣೆಯ 58ನೇ ದಿನ ಮಂಗಳವಾರ ಸಂಜೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಅರ್ಪಿಸಿದ ಯಕ್ಷಗಾನಾರಾಧನೆ ಕಾರ್ಯಕ್ರಮದ ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು.
ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಮಾತನಾಡಿ, ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಯ ಗುರಿಯನ್ನಿಟ್ಟು ಹುಟ್ಟಿಕೊಂಡ ಸಂಸ್ಥೆಯ ಮೂಲಕ ಅನೇಕ ಕಲೆ, ಕಲಾವಿದರಿಗೆ ನೆರವಾಗಿದ್ದೇವೆ. ಟ್ರಸ್ಟಿನ ಬೆಳವಣಿಗೆಯಲ್ಲಿ ಎಡನೀರು ಶ್ರೀಗಳ ಅನುಗ್ರಹವಿದೆ. ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನದ ಮೂಲಕ ಕ್ರಾಂತಿಯನ್ನುಂಟುಮಾಡಿರುವುದಲ್ಲದೆ ಕಲಾವಿದರನ್ನು ಪ್ರೋತ್ಸಾಹಿಸಿ ಯಕ್ಷಗಾನ ಉತ್ತುಂಗಕ್ಕೇರಲು ಕಾರಣರಾಗಿದ್ದಾರೆ. ಹಿರಿಯ ಗುರುಗಳ ಪರಂಪರೆಯನ್ನು ಇಂದಿನ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಸ್ಥಾಪಕಾಧ್ಯಕ್ಷ ಯಕ್ಷಧ್ರ್ರುವ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಎಲ್ಲಾ ಕಲಾಪ್ರಾಕಾರಗಳಿಗೆ ಆಶ್ರಯತಾಣವಾಗಿರುವ ಎಡನೀರು ಮಠವು ಕಲಾವಿದರಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮಿಂದ ಇನ್ನಷ್ಟು ಸೇವೆಗೆ ಗುರುಗಳ ಆಶೀರ್ವಾದ, ಅನುಗ್ರಹವನ್ನು ಸದಾ ಬೇಡಿಕೊಳ್ಳುತ್ತೇವೆ ಎಂದರು.
ಯಕ್ಷಧ್ರ್ರುವ ಪಟ್ಲ ಫೌಂಡೇಶನ್‍ನ ಸುೀಶ್ ರೈ, ಜೊತೆಕಾರ್ಯದರ್ಶಿ ರವಿಚಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸತೀಶ್ ಶೆಟ್ಟಿ ಪಟ್ಲ, ಸತ್ಯನಾರಾಯಣ ಪುಣಿಂಚಿÀತ್ತಾಯ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಅಮೃತಾ ಅಡಿಗ ಅವರಿಂದ ಯಕ್ಷಗಾನಾರಾಧನೆ ನಡೆಯಿತು. ಹಿಮ್ಮೇಳದಲ್ಲಿ ಚೆಂಡೆಮದ್ದಳೆಯಲ್ಲಿ ರೋಹಿತ್ ಉಚ್ಚಿಲ ಹಾಗೂ ಗುರುಪ್ರಸಾದ ಬೊಳಿಂಜಡ್ಕ ಗಮನಸೆಳೆದರು. ಚಕ್ರತಾಳದಲ್ಲಿ ರಾಜೇಂದ್ರಕೃಷ್ಣ ಪಂಜಿಗದ್ದೆ ಸಹಕರಿಸಿದರು.