ಕಾಸರಗೋಡು: ಸಾಂಸ್ಕøತಿಕ ಮತ್ತು ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿಯ ಹೊಸ ಘಟಕ 'ಸ್ವರಚಿನ್ನಾರಿ'ಯ ಉದ್ಘಾಟನೆ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು. ಕರ್ನಾಟಕ ಸುಗಮ ಸಂಗೀತ ಪರಿಷತ್ ರಾಜ್ಯಾಧ್ಯಕ್ಷ ಖ್ಯಾತ ಗಾಯಕ ವೈ.ಕೆ ಮುದ್ದುಕೃಷ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಮಾಡಿಕೊಡುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಸ್ವರಚಿನ್ನಾರಿಯ ಕಾರ್ಯ ಶ್ಲಾಘನೀಯ. , ಈ ನೆಲದ-ಈ ಸ್ವರದ ನಾದ ಮಾಧುರ್ಯದ ಪ್ರತೀಕವಾಗಿರುವ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ವೇದಿಕೆಯನ್ನು ಮುಂದೆ ದೂರದ ಬೆಂಗಳೂರಿನಲ್ಲೂ ಕಲ್ಪಿಸಲು ಶ್ರಮಿಸಲಾಗುವುದು. ತಮ್ಮ ಸುಗಮ ಸಂಗೀತದ ಜೀವನವನ್ನು ಕಾಸರಗೋಡಿನ ಕನ್ನಡ ನೆಲದ ಮೂಲಕ ಆರಂಭಿಸಿದ ಸವಿ ನೆನಪುಗಳನ್ನು ಈ ಸಂದರ್ಭ ಹಂಚಿಕೊಂಡರು.
ಖ್ಯಾತ ಚಲನಚಿತ್ರ ನಟ, ಅಂತಾರಾಷ್ಟ್ರೀಯ ಖ್ಯಾತಿಯ ಮಿಮಿಕ್ರಿ ಕಲಾವಿದ ಮಿಮಿಕ್ರಿ ದಯಾನಂದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಉಳಿಸಿಬೆಳೆಸಬೇಕಾದ ಅನಿವಾರ್ಯತೆಯಿದೆ. ಗಡಿನಾಡ ಸಂಗೀತ ಕಲಾವಿದರನ್ನು ಒಟ್ಟುಸೇರಿಸಿ ಹುಟ್ಟುಹಾಕಿರುವ ಸ್ವರಚಿನ್ನಾರಿ ಘಟಕ ಈ ಮಹತ್ಕಾರ್ಯಕ್ಕೆ ಪ್ರೇರಣೆಯಾಗಲಿ ಎಂದು ತಿಳಿಸಿದರು.
ಖ್ಯಾತ ಸಾಹಿತಿ ಡಾ. ನಾ ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್ ವಿ ಭಟ್, ಖ್ಯಾತ ನೇತ್ರ ತಜ್ಞರು ಧಾರ್ಮಿಕ ಮುಂದಾಳು ಡಾ ಅನಂತ ಕಾಮತ್ ಉಪಸ್ಥಿತರಿದ್ದರು. ನಾರಿಚಿನ್ನಾರಿಯ ಸದಸ್ಯೆ ಉಷಾರಾಮ್ ಪ್ರಾರ್ಥನೆ ಹಾಡಿದರು. ಡಾ.ಲಕ್ಷ್ಮಿ ಹಾಗೂ ಡಾ. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಸ್ವರಚಿನ್ನಾರಿಯ ಜೊತೆ ಕಾರ್ಯದರ್ಶಿ ಗಾಯಕಿ ಪ್ರತಿಜ್ಞಾ ರಂಜಿತ್ ವಂದಿಸಿದರು.
ಭಾವಗೀತೆ ಗಾಯನ:
'ಈ ನೆಲ-ಈ ಸ್ವರ ಸುಗಮ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ದಯಾನಂದ ಅವರು ತಮ್ಮ ಹಾಸ್ಯ ಚಟಾಕಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ಕಯ್ಯಾರ ಕಿಞಣ್ಣ ರೈ , ಮಂಜೇಶ್ವರ ಗೋವಿಂದ ಪೈ, ಕೆ ವಿ ತಿರುಮಲೇಶ್ , ವೆಂಕಟರಾಜ ಪುಣಿಂಚಿತ್ತಾಯ, ಬಿ ಕೃಷ್ಣ ಪೈ, ಡಾ ರಮಾನಂದ ಬನಾರಿ, ಡಾ ನಾ ದಾಮೋದರ ಶೆಟ್ಟಿ, ಶ್ರೀಕೃಷ್ಣಯ್ಯ ಅನಂತಪುರ, ರಾಧಾಕೃಷ್ಣ ಉಳಿಯತಡ್ಕ ,ಡಾ | ಯು ಮಹೇಶ್ವರಿ ವಿಜಯಲಕ್ಷ್ಮಿ ಶ್ಯಾನುಭಾಗ್, ಸ್ನೇಹಲತಾ ದಿವಾಕರ್, ಅನ್ನಪೂರ್ಣ ಬೆಜಪ್ಪೆ, ಸರ್ವಮಂಗಳ ಜಯ ಪುಣಿoಚಿತ್ತಾಯ, ಸೌಮ್ಯಾ ಪ್ರವೀಣ್ ಅವರ ಆಯ್ದ ಹಾಡುಗಳಿಗೆ ಹಲವು ಹೊಸ ಸಾಹಿತ್ಯಗಳಿಗೆ ರಾಗ ಸಂಯೋಜಿಸಿ ಹಾಡಲಾಯಿತು. ಗಾಯಕರಾಗಿ ಕಿಶೋರ್ ಪೆರ್ಲ, ಗಣೇಶ್ ಪ್ರಸಾದ್ ನಾಯಕ್, ರತ್ನಾಕರ್ ಎಸ್ ಓಡಂಗಲ್ಲು, ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್, ಬಬಿತಾ ಆಚಾರ್ಯ ಸಹಕರಿಸಿದರು. ಹಿಮ್ಮೇಳನದಲ್ಲಿ ಪುರುಷೋತ್ತಮ್ ಕೊಪ್ಪಲ್, ಸತ್ಯನಾರಾಯಣ ಐಲಾ, ಪ್ರಭಾಕರ ಮಲ್ಲ , ಗಿರೀಶ್ ಪೆರ್ಲ ಹಾಗೂ ಶರತ್ ಪೆರ್ಲ ಸಹಕರಿಸಿದರು.
ರಂಗಚಿನ್ನಾರಿ ನಿರ್ದೇಶಕ ಸ್ವರ ಚಿನ್ನಾರಿ ಯ ಸಂಚಾಲಕ, ಚಿತ್ರ ನಟ ಕಾಸರಗೋಡು ಚಿನ್ನಾ ಒಟ್ಟು ಕಾರ್ಯಕ್ರಮದ ಬಗ್ಗೆ ಮಾತನಾಡಿ, ಮುಂದೆ ಸ್ವರಚಿನ್ನಾರಿಯ ಇದೇ ತಂಡ ಕಾಸರಗೋಡಿನಿಂದ ಬೆಳಗಾವಿವರೆಗೆ ಕನ್ನಡ ಸುಗಮ ಸಂಗೀತದ ಕಂಪನ್ನು ಬೀರಲಿದ್ದು ಹೊಸ ಸಂಚಲನವನ್ನು ಸೃಷ್ಟಿಸಲಿದೆ. ಈ ನಿಟ್ಟಿನಲ್ಲಿ ಕಲಾವಿದರಿಗೆ ಆಯಾ ಕ್ಷೇತ್ರಗಳಿಗೆ ಬೇಕಾಗುವಂತೆ ಇನ್ನಷ್ಟು ತರಬೇತಿ ನೀಡಲು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕಾರ್ಯೋನ್ಮುಖವಗಲಿರುವುದಾಗಿ ತಿಳಿಸಿದರು.