ನವದೆಹಲಿ: ಅಮೇಥಿಯ ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಿಗೆಯನ್ನು ಅಮಾನತುಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಪೂರ್ಣ ತನಿಖೆ ನಡೆಸದೆ "ತ್ವರಿತವಾಗಿ ಅಮಾನತು" ಮಾಡುವ ನಿರ್ಧಾರ ಸರಿಯಲ್ಲ. ಇದು ಘೋರ ಅನ್ಯಾಯ ಎಂದು ಆಡಳಿತರೂಢ ಪಕ್ಷದ ಸಂಸದ ಹೇಳಿದ್ದಾರೆ.
ಈ ಸಂಬಂಧ ವರುಣ್ ಗಾಂಧಿ ಅವರು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ಪತ್ರ ಬರೆದಿದ್ದು, ಹೆಚ್ಚಿನ ಸಂಖ್ಯೆಯ ಜನ ಪ್ರಾಥಮಿಕ ಆರೋಗ್ಯ ಸೇವೆಗಳಿಗಾಗಿ ಈ ಆಸ್ಪತ್ರೆಯನ್ನು ಅವಲಂಬಿಸಿರುವುದರಿಂದ ಪರವಾನಿಗೆ ಅಮಾನತುಗೊಳಿಸಿದರೆ ಈ ಪ್ರದೇಶದ ಆರೋಗ್ಯ ಸೇವೆ, ಉದ್ಯೋಗ ಮತ್ತು ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್‌ನಿಂದ ಭಾರತೀಯ ಜನತಾ ಪಕ್ಷದ(ಬಿಜೆಪಿ) ಲೋಕಸಭಾ ಸಂಸದರಾಗಿ ವರುಣ್ ಗಾಂಧಿ ಅವರು ಆಯ್ಕೆಯಾದ ನಂತರ ಅವರ ತಂದೆಯ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅಮೇಥಿ ಆಸ್ಪತ್ರೆಯನ್ನು ನಡೆಸುತ್ತಿರುವ ಸಂಜಯ್ ಗಾಂಧಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ರಸ್ಟ್‌ನ ಸದಸ್ಯರಾಗಿದ್ದಾರೆ.
"ಅಮೇಥಿಯ ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಿಗೆಯನ್ನು ಸಂಪೂರ್ಣ ತನಿಖೆ ನಡೆಸದೆ ತ್ವರಿತವಾಗಿ ಅಮಾನತುಗೊಳಿಸಿರುವುದು ಪ್ರಾಥಮಿಕ ಆರೋಗ್ಯ ಸೇವೆಗಳಿಗೆ ಮಾತ್ರವಲ್ಲದೆ ತಮ್ಮ ಜೀವನೋಪಾಯಕ್ಕಾಗಿ ಸಂಸ್ಥೆಯನ್ನು ಅವಲಂಬಿಸಿರುವ ಎಲ್ಲರಿಗೂ ಅನ್ಯಾಯವಾಗಿದೆ" ಎಂದು ವರುಣ್ ಗಾಂಧಿ ಹೇಳಿದ್ದಾರೆ.
ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಗಿ ಅಮಾನತುಗೊಳಿಸುವ ನಿರ್ಧಾರವನ್ನು ಹಿಂಪಡೆಯುವಂತೆ ಕಾಂಗ್ರೆಸ್ ಸಹ ಒತ್ತಾಯಿಸಿದೆ. ಆದರೆ ಮಹಿಳೆಯ ಸಾವಿನ ತನಿಖೆಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಸಿಎಂ ಪಾಠಕ್ ಅವರು ಗುರುವಾರ ಹೇಳಿದ್ದಾರೆ.