ತ್ರಿಶೂರ್: ತ್ರಿಶೂರ್ ಜಿಲ್ಲೆಯ ಜನನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಮಲಯಾಳಂ ನಟ-ನಿರ್ದೇಶಕ ಜಾಯ್ ಮ್ಯಾಥ್ಯೂ ಗಾಯಗೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಚಾವಕ್ಕಾಡ್-ಪೊನ್ನಾನಿ ಹೆದ್ದಾರಿಯ ಮಂಡಲಂಕುನ್ನು ಎಂಬಲ್ಲಿ ಮ್ಯಾಥ್ಯೂ ಪ್ರಯಾಣಿಸುತ್ತಿದ್ದ ಕಾರು ಪಿಕ್ ಅಪ್ ವ್ಯಾನ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಮ್ಯಾಥ್ಯೂ ಮತ್ತು ವ್ಯಾನ್ ಚಾಲಕ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಕಾರನ್ನು ಮ್ಯಾಥ್ಯೂ ಅವರ ಚಾಲಕ ಚಲಾಯಿಸುತ್ತಿದ್ದರು. ಮ್ಯಾಥ್ಯೂ ಅವರ ಮೂಗಿಗೆ ಸಣ್ಣ ಗಾಯವಾಗಿದೆ. ಪಿಕ್-ಅಪ್ ವ್ಯಾನ್ ಚಾಲಕನ ಕಾಲಿಗೆ ಗಾಯವಾಗಿದೆ. ಅವರಿಬ್ಬರನ್ನೂ ಹತ್ತಿರದ ಖಾಸಗಿ ಆಸ್ಪತ್ರೆಗೆ ಶೀಘ್ರದಲ್ಲೇ ಸಾಗಿಸಲಾಯಿತು ಎಂದು ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಅವರ ಸ್ಥಿತಿ ಸ್ಥಿರವಾಗಿದೆ ಎಂದರು.
ಡಿಕ್ಕಿಯ ರಭಸಕ್ಕೆ ವಾಹನದೊಳಗೆ ಸಿಲುಕಿಕೊಂಡಿದ್ದ ಪಿಕ್‍ಅಪ್ ವ್ಯಾನ್‍ನ ಚಾಲಕನನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳೀಯರ ಬೆಂಬಲದೊಂದಿಗೆ ಹೊರಗೆ ತಂದರು ಎಂದು ಅವರು ಹೇಳಿದರು.
ಪ್ರಶಸ್ತಿ ವಿಜೇತ ನಟ ಇತ್ತೀಚೆಗೆ ಕೇರಳದ ಎಡರಂಗ ಸರ್ಕಾರದ ವಿರುದ್ಧ ವಿಮರ್ಶಾತ್ಮಕ ನಿಲುವು ಮತ್ತು ಟೀಕೆಗಳಿಗಾಗಿ ಸುದ್ದಿಯಲ್ಲಿದ್ದರು.