ಲಖನೌ: ಕೇಂದ್ರ ನಗರಾಭಿವೃದ್ದಿ ಖಾತೆ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರಿಗೆ ಸೇರಿದ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಶುಕ್ರವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಹತ್ಯೆಯಾದವನನ್ನು ವಿನಯ್ ಶ್ರೀವಾಸ್ತವ್ (30) ಎಂದು ಗುರುತಿಸಲಾಗಿದೆ.
ಠಾಕೂರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೌಶಲ್ ಕಿಶೋರ್ ಅವರಿಗೆ ಸೇರಿದ ಮನೆಯಲ್ಲಿ ಕೊಲೆಯಾಗಿದೆ ಎಂಬ ಮಾಹಿತಿ ಬಂದಿತ್ತು. ವಿನಯ್ ಶ್ರೀವಾಸ್ತವ್ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಬೆಳಗಿನ ಜಾವ 4 ಗಂಟೆಗೆ ಕೊಲೆಯಾಗಿದೆ ಎಂದು ಲಖನೌ ಜಂಟಿ ಪೊಲೀಸ್ ಆಯುಕ್ತ ಅಕ್ಷಯ್ ಕುಲಹರಿ ತಿಳಿಸಿದ್ದಾರೆ.
ಕೊಲೆಯಾದ ಮನೆಯಲ್ಲಿ ಸಚಿವ ಕೌಶಲ್ ಕಿಶೋರ್ ಅವರ ಮಗ ವಿಕಾಸ್ ಕಿಶೋರ್ ವಾಸಿಸುತ್ತಿದ್ದರು. ಕೊಲೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೊಲೆ ಕುರಿತು ಮೃತನ ಸಹೋದರ ದೂರು ನೀಡಿದ್ದು, ಅನುಮಾನದ ಮೇಲೆ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಕ್ಷಯ್ ಕುಲಹರಿ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಪಿಸ್ತೂಲ್ ವಿಕಾಸ್ ಕಿಶೋರ್‌ಗೆ ಸೇರಿದ್ದು ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಕೌಶಲ್ ಕಿಶೋರ್, ಕೊಲೆ ಬಗ್ಗೆ ಮಾಹಿತಿ ತಿಳಿದಿದ್ದು ಆ ವೇಳೆ ಆ ಮನೆಯಲ್ಲಿ ನನ್ನ ಮಗ ಇರಲಿಲ್ಲ. ನಾನೂ ಇರಲಿಲ್ಲ. ಮಗ ನನ್ನೊಂದಿಗೆ ದೆಹಲಿಯಲ್ಲಿ ಇದ್ದ ಎಂದು ತಿಳಿಸಿದ್ದಾರೆ.
ಬಿಜೆಪಿ ಕೌಶಲ್ ಕಿಶೋರ್ ಅವರು ಲಖನೌ ವ್ಯಾಪ್ತಿಯ ಮೋಹನಲಾಲ್‌ಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.