ನವದೆಹಲಿ: ಇಂದು ಸೆಪ್ಟೆಂಬರ್ 15, ಎಂಜಿನಿಯರ್ ಗಳ ದಿನ. ಪ್ರತಿ ವರ್ಷ ಸೆಪ್ಟೆಂಬರ್ 15 ನ್ನು ಭಾರತದಲ್ಲಿ ಎಂಜಿನಿಯರ್ಸ್ ಡೇ ಎಂದು ಆಚರಣೆ ಮಾಡಲಾಗುತ್ತದೆ. ಭಾರತದ ಮಹಾನ್ ಎಂಜಿನಿಯರ್ ಮತ್ತು ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನೇ ದೇಶದಲ್ಲಿ ಇಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ.
ಇಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕೊಡುಗೆ ಗಮನಾರ್ಹವಾದುದು. ಭಾರತದಲ್ಲಿ ಅಣೆಕಟ್ಟು, ಜಲಾಶಯ ಮತ್ತು ಜಲವಿದ್ಯುತ್ ಯೋಜನೆಗಳ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಹಾಗಾಗಿ ವಿಶ್ವೇಶ್ವರಯ್ಯ ಅವರನ್ನು ಮಹಾನ್ ರಾಷ್ಟ್ರ ನಿರ್ಮಾಪಕರಲ್ಲಿ ಒಬ್ಬರೆಂದು ಭಾರತದ ಮಹಾನ್ ಇಂಜಿನಿಯರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
1968 ರಲ್ಲಿ ಭಾರತ ಸರ್ಕಾರವು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ಸ್ ದಿನ ಎಂದು ಆಚರಣೆ ಮಾಡುವಂತೆ ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನ ಆಚರಣೆ ಮಾಡಲಾಗುತ್ತಿದೆ. ವಿಶ್ವೇಶ್ವರಯ್ಯನವರು ಕರ್ನಾಟಕ ಜಿಲ್ಲೆಯ ಮೈಸೂರಿನ ಕೋಲಾರ ಜಿಲ್ಲೆಯಲ್ಲಿ 15 ಸೆಪ್ಟೆಂಬರ್ 1860 ರಂದು ಜನಿಸಿದರು.
ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಎಲ್ಲಾ ಇಂಜಿನಿಯರ್‌ಗಳನ್ನು ಗೌರವಿಸಲು ಮತ್ತು ಗುರುತಿಸಲು ಈ ದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.
ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಸ್ಮರಣೆ, ಶುಭಾಶಯ: ಎಂಜಿನಿಯರ್ ಗಳ ದಿನದಂದು ನಾನು ದೂರದೃಷ್ಟಿ ಹೊಂದಿರುವ ಶ್ರೇಷ್ಟ ಆಡಳಿತಗಾರ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುತ್ತೇನೆ. ಸಂಶೋಧನೆ ಮತ್ತು ದೇಶ ಸೇವೆಯಲ್ಲಿ ತಲೆತಲಾಂತರದವರೆಗೆ ವಿಶ್ವೇಶ್ವರಯ್ಯನವರು ಸ್ಫೂರ್ತಿಯಾಗುತ್ತಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿಯವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ವಿಶ್ವೇಶ್ವರಯ್ಯನವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.