ಉಜ್ಜಯಿನಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮಧ್ಯ ಪ್ರದೇಶದ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಇತರ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯ ಆಟೋರಿಕ್ಷಾದ ಪ್ರಯಾಣಿಕರ ಸೀಟಿನ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಜ್ಜಯಿನಿ ಪೊಲೀಸರ ಪ್ರಕಾರ, 12 ವರ್ಷದ ಅಪ್ರಾಪ್ತ ಬಾಲಕಿ ಸತ್ನಾ ಜಿಲ್ಲೆಗೆ ಸೇರಿದ್ದು, ಕಳೆದ ಸೋಮವಾರ ಉಜ್ಜಯಿನಿಯ ಮಹಾಕಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು.
ನಂತರ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆಟೋರಿಕ್ಷಾ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆಟೋರಿಕ್ಷಾದ ಪ್ರಯಾಣಿಕರ ಸೀಟಿನಲ್ಲಿ ರಕ್ತದ ಕಲೆಗಳು ಇರುವುದನ್ನು ನಾವು ಪತ್ತೆ ಮಾಡಿದ್ದೇವೆ" ಎಂದು ಉಜ್ಜಯಿನಿ ಎಸ್ಪಿ ಸಚಿನ್ ಶರ್ಮಾ ಅವರು ಹೇಳಿದ್ದಾರೆ.
ಆರೋಪಿಗಳು ಅತ್ಯಾಚಾರವೆಸಗಿ ಆಕೆಯನ್ನು ಎಲ್ಲೋ ಎಸೆದು ಪರಾರಿಯಾಗಿದ್ದರು. ಬಾಲಕಿ ರಕ್ತಸಿಕ್ತ ಸ್ಥಿತಿಯಲ್ಲಿ ಸಹಾಯ ಬೇಡುತ್ತಾ 8 ಕಿ.ಮೀ ನಡೆದುಕೊಂಡು ಬಂದಿದ್ದಾಳೆ.
12 ವರ್ಷದ ಬಾಲಕಿಗೆ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮಾಡಿದೆ ಮತ್ತು ಆಕೆಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.