ನವದೆಹಲಿ (PTI): ರೈಲ್ವೆ ಮಂಡಳಿಗೆ ಮೊದಲ ಮಹಿಳಾ ಸಿಇಒ ಮತ್ತು ಅಧ್ಯಕ್ಷರಾಗಿ ಜಯಾ ವರ್ಮಾ ಸಿನ್ಹಾ ಅವರನ್ನು ಸರ್ಕಾರ ಗುರುವಾರ ನೇಮಿಸಿ ಆದೇಶ ಹೊರಡಿಸಿದೆ.
ಅನಿಲ್ ಕುಮಾರ್ ಲಾಹೊಟಿ ಅವರಿಂದ ತೆರವಾಗುವ ಈ ಹುದ್ದೆಗೆ ಜಯಾ ಅವರು ಸೆಪ್ಟೆಂಬರ್ 1 ಅಥವಾ ನಂತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರಾವಧಿ 2024ರ ಆಗಸ್ಟ್ 31ರವರೆಗೂ ಇರಲಿದೆ.
ಜಯಾ ಅವರು ಅಕ್ಟೋಬರ್ 1 ರಂದು ನಿವೃತ್ತರಾಗಲಿದ್ದಾರೆ. ಆದರೆ, ಅವರು ಅದೇ ದಿನ ಮರು ನೇಮಕವಾಗಲಿದ್ದಾರೆ.
ಬಾಲೇಶ್ವರ ರೈಲ್ವೆ ದುರಂತದ ಸಂದರ್ಭದಲ್ಲಿ ಜಯಾ ಅವರು ಸಂಕೀರ್ಣ ಸಿಗ್ನಲಿಂಗ್ ವ್ಯವಸ್ಥೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ದುರಂತದಲ್ಲಿ ಸುಮಾರು 300 ಜನರು ಮೃತಪಟ್ಟಿದ್ದರು.
ಅಲಹಾಬಾದ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿರುವ ಜಯಾ ಅವರು 1988ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವೆ (ಐಆರ್‌ಟಿಎಸ್) ಅಧಿಕಾರಿಯಾಗಿ ಸೇವೆ ಆರಂಭಿಸಿದರು. ಅವರು ಉತ್ತರ, ಆಗ್ನೇಯ ಮತ್ತು ಪೂರ್ವ ರೈಲ್ವೆಯಲ್ಲೂ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ ಅವರು, ಬಾಂಗ್ಲಾದೇಶದ ಢಾಕಾದಲ್ಲಿ ನಾಲ್ಕು ವರ್ಷಗಳ ಕಾಲ ಭಾರತದ ಹೈ ಕಮಿಷನ್‌ಗೆ ರೈಲ್ವೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಕೋಲ್ಕತ್ತ ಮತ್ತು ಢಾಕಾ ನಡುವೆ ಮೈತ್ರಿ ಎಕ್ಸ್‌ಪ್ರೆಸ್ ಆರಂಭವಾಯಿತು. ಪೂರ್ವ ರೈಲ್ವೆಯ ಸೀಲ್ಡಾ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.