ಬದಿಯಡ್ಕ: ಎಡನೀರು ಮಠದ ಶ್ರೀಕೃಷ್ಣ ರಂಗಮಂಟಪದಲ್ಲಿ 36ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಸೆ.19 ಮಂಗಳವಾರ ನಡೆಯಲಿದೆ. ಬೆಳಗ್ಗೆ ಗಣಪತಿ ಹೋಮ, ಮಹಾಗಣಪತಿ ವಿಗ್ರಹ ಪ್ರತಿಷ್ಠೆ, 8.30ಕ್ಕೆ ಧ್ವಜಾರೋಹಣ, 8.45ರಿಂದ ಭಜನೆ, 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ರಾಜೇಂದ್ರ ಕಲ್ಲೂರಾಯ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಕೇಶವನ್ ಕಣ್ಣೂರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಕೆ.ಮಾಧವ ಹೇರಳ, ವೇಣುಗೋಪಾಲನ್ ಇ. ಉಪಸ್ಥಿತರಿರುವರು. ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿರುವುದು. 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಅಪರಾಹ್ನ 2.30ಕ್ಕೆ ವಿದುಷಿ ಡಾ. ವಿದ್ಯಾಲಕ್ಷ್ಮೀ ನಾಟ್ಯವಿದ್ಯಾಲಯ ಕುಂಬಳೆ ಇವರಿಂದ ನೃತ್ಯಸಂಭ್ರಮ, ಸಂಜೆ 5.30ಕ್ಕೆ ಧ್ವಜಾವರೋಹಣ, 5.45ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವೈಭವದ ಶೋಭಾಯಾತ್ರೆ, ವಿಗ್ರಹ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.