ತಿರುವನಂತಪುರ: ಕಟ್ಟಕಡ ಸಮೀಪದ ಪುವಾಚ್ಚಲ್ ನಲ್ಲಿ ಆ.30ರಂದು ಅಪಘಾತದಿಂದಾಗಿ ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ ಭಾವಿಸಲಾಗಿದ್ದ 15ರ ಹರೆಯದ ಬಾಲಕನನ್ನು ವಾಸ್ತವದಲ್ಲಿ ಕೊಲೆ ಮಾಡಲಾಗಿತ್ತು ಎಂದು ಕೇರಳ ಪೋಲಿಸರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿ ಆದಿಶೇಖರ ತನ್ನ ದೂರದ ಸಂಬಂಧಿ ಪ್ರಿಯರಂಜನ್ ಚಲಾಯಿಸುತ್ತಿದ್ದ ಇಲೆಕ್ಟ್ರಿಕ್ ಕಾರು ಢಿಕ್ಕಿ ಹೊಡೆದು ಮೃತಪಟ್ಟಿದ್ದ. ಪೊಲೀಸರು ಆರಂಭದಲ್ಲಿ ಅಜಾಗ್ರತೆಯ ಚಾಲನೆಯ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಆದರೆ ಪ್ರಿಯರಂಜನ್ ಉದ್ದೇಶಪೂರ್ವಕವಾಗಿ ಕಾರನ್ನು ಬಾಲಕನಿಗೆ ಢಿಕ್ಕಿ ಹೊಡೆಸಿದ್ದ ಎನ್ನುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಳಿಸಿವೆ. ಈ ಸಾಕ್ಷದ ಆಧಾರದಲ್ಲಿ ಇದೊಂದು ಕ್ರೂರ ಕೊಲೆ ಪ್ರಕರಣವಾಗಿದೆ ಎಂದು ಪೊಲೀಸರೀಗ ದೃಢಪಡಿಸಿದ್ದಾರೆ.
'ಬಾಲಕನ ಸಾವಿನ ಕುರಿತು ಕುಟುಂಬ ಸದಸ್ಯರು ಶಂಕೆಯನ್ನು ವ್ಯಕ್ತಪಡಿಸಿದ್ದರು. ಪ್ರದೇಶದಲ್ಲಿಯ ದೇವಸ್ಥಾನವೊಂದರ ಬಳಿ ಮೂತ್ರ ವಿಸರ್ಜಿಸದಂತೆ ಬಾಲಕ ಪ್ರಿಯರಂಜನ್ ಗೆ ಹೇಳಿದ್ದ ಎನ್ನುವುದಕ್ಕೆ ಸಾಕ್ಷಿಯಿದೆ. ಸೇಡು ತೀರಿಸಿಕೊಳ್ಳಲು ಆತ ಬಾಲಕನಿಗೆ ಕಾರು ಢಿಕ್ಕಿ ಹೊಡೆಸಿದ್ದ. ಘಟನೆಯ ಬಳಿಕ ಆತ ಮಾಡಿದ್ದ ಫೋನ್ ಕರೆಗಳು ಮತ್ತು ಆತ ತಲೆಮರೆಸಿಕೊಂಡಿರುವುದು ನಮ್ಮ ಶಂಕೆಗಳಿಗೆ ಇನ್ನಷ್ಟು ಪುಷ್ಟಿ ನೀಡಿವೆ. ಇದೀಗ ಪ್ರಿಯರಂಜನ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ 'ಎಂದು ಕಟ್ಟಕಡ ಡಿವೈಎಸ್ಪಿ ಎನ್.ಶಿಬು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೊಲ್ಲಲ್ಪಟ್ಟ ಸಂದರ್ಭದಲ್ಲಿ ಆದಿಶೇಖರ ತನ್ನ ಮನೆಯ ಮುಂದೆ ಸ್ನೇಹಿತನೊಂದಿಗೆ ಸೈಕಲ್ ಚಲಾಯಿಸುತ್ತಿದ್ದ. ಆತ ಸೈಕಲ್ ಹತ್ತುತ್ತಿದ್ದಂತೆ ಪ್ರಿಯರಂಜನ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆಸಿದ್ದನ್ನು ಮತ್ತು ಕೆಳಕ್ಕೆ ಬಿದ್ದಿದ್ದ ಬಾಲಕನ ಮೇಲೆಯೇ ಹತ್ತಿಸಿದ್ದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ.
ಸ್ಥಳೀಯರು ತಕ್ಷಣ ಆದಿಶೇಖರನನ್ನು ಆಸ್ಪತ್ರೆಗೆ ಸಾಗಿಸಿದ್ದರಾದರೂ ಆ ವೇಳೆಗಾಗಲೇ ಆತ ಕೊನೆಯುಸಿರೆಳೆದಿದ್ದ.
ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನು ತಡೆಯಲು ಪ್ರಿಯರಂಜನ್ ತನ್ನ ಕಾರನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದ. ಬಳಿಕ ಸ್ಥಳದಿಂದ ತನ್ನ ಕಾರನ್ನು ತೆಗೆದಿದ್ದ ಆತ ಪೆಯ್ಯಡ್ ಬಳಿ ಅದನ್ನು ತೊರೆದಿದ್ದ ಎಂದು ಮೃತನ ಸಂಬಂಧಿಯೋರ್ವರು ತಿಳಿಸಿದರು.
ಗಲ್ಫ್ ದೇಶದಲ್ಲಿ ಕೆಲಸದಲ್ಲಿದ್ದ ಪ್ರಿಯರಂಜನ್ ಓಣಂ ಹಬ್ಬಕ್ಕಾಗಿ ಊರಿಗೆ ಮರಳಿದ್ದ.
'ಆರೋಪಿ ಪ್ರಿಯರಂಜನ್ ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ. ನಮ್ಮ ಠಾಣಾ ವ್ಯಾಪ್ತಿಯಲ್ಲಿ ಆತನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ, ಇತರ ಠಾಣಾ ವ್ಯಾಪ್ತಿಗಳಲ್ಲಿ ಪ್ರಕರಣಗಳು ಇವೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ' ಎಂದು ಶಿಬು ತಿಳಿಸಿದರು.