ನವದೆಹಲಿ: ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯಿಂದಾಗಿ ಎದ್ದಿರುವ ವಿವಾದ ಕುರಿತು ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದು, 'ಈ ಹೇಳಿಕೆಗೆ ತಕ್ಕ ಉತ್ತರ ಅಗತ್ಯ' ಎಂದು ಬುಧವಾರ ಹೇಳಿದ್ದಾರೆ.
'ಇಂತಹ ಹೇಳಿಕೆ ನೀಡಿರುವ ಪಕ್ಷಗಳು ಹಾಗೂ ನಾಯಕರ ಮುಖವಾಡ ಕಳಚಿ, ಸತ್ಯವನ್ನು ಜನರ ಮುಂದಿಡಬೇಕು. ವಾಸ್ತವಾಂಶಗಳ ಆಧಾರದಲ್ಲಿ ಪ್ರತಿಕ್ರಿಯೆ ನೀಡಬೇಕು' ಎಂದೂ ಹೇಳಿದ್ದಾರೆ.
ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ನಡೆದ ಮಂತ್ರಿ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಮೋದಿ ಈ ಮಾತು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
'ಸಾವಿರಾರು ವರ್ಷಗಳಿಂದಲೂ ಸನಾತನ ಧರ್ಮದಲ್ಲಿ ಸಹಿಷ್ಣುತೆ ಹಾಸುಹೊಕ್ಕಾಗಿದೆ. ಹೀಗಾಗಿ ವಿರೋಧ ಪಕ್ಷಗಳ ನಾಯಕರು ಸನಾತನ ಧರ್ಮ ಕುರಿತು ನೀಡಿರುವ ಹೇಳಿಕೆಗಳನ್ನು ಬಲವಾಗಿ ಖಂಡಿಸಬೇಕು ಎಂದು ಮೋದಿ ಅವರು ಸಚಿವರಿಗೆ ಸೂಚಿಸಿದರು' ಎಂದು ಇವೇ ಮೂಲಗಳು ತಿಳಿಸಿವೆ.
'ಸನಾತನ ಧರ್ಮ ಮಲೇರಿಯಾ, ಡೆಂಗಿ, ಕೊರೊನಾ ರೋಗ ಇದ್ದಂತೆ. ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು' ಎಂದು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಉದಯನಿಧಿ ಹೇಳಿದ್ದರು.
'ಸಂಸತ್‌ನ ನೂತನ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಕೇಂದ್ರ ಸರ್ಕಾರದ ಈ ನಡೆ ಸನಾತನ ಧರ್ಮ ಪಾಲಿಸುವವರ ತಾರತಮ್ಯಕ್ಕೆ ನಿದರ್ಶನ' ಎಂದೂ ಉದಯನಿಧಿ ಮಂಗಳವಾರ ಹೇಳಿದ್ದಾರೆ. ಮಾರನೇ ದಿನವೇ ಮೋದಿ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಕೀಯವಾಗಿ ಬಹಳ ಸೂಕ್ಷ್ಮವಾಗಿರುವ ಈ ವಿಚಾರ ಕುರಿತು ಕೇಂದ್ರ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಕೆಲವೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿರುವುದೇ ಇದಕ್ಕೆ ಕಾರಣ. ವಿರೋಧ ಪಕ್ಷಗಳು ಪರಿಶಿಷ್ಟರ ಮತಗಳನ್ನು ತಮ್ಮತ್ತ ಸೆಳೆಯಲು ಈ ವಿವಾದವನ್ನು ಬಳಸಿಕೊಳ್ಳುವ ಸಾಧ್ಯತೆ ಕೂಡ ಸರ್ಕಾರದ ಈ ಎಚ್ಚರಿಕೆಯ ನಡೆಗೆ ಕಾರಣ ಎನ್ನಲಾಗುತ್ತಿದೆ.
ಉದಯನಿಧಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 'ಉದಯನಿಧಿ ಹೇಳಿಕೆ ಸಾಮೂಹಿಕ ನರಹತ್ಯೆಗೆ ಕರೆ ನೀಡಿರುವುದಕ್ಕೆ ಸಮ' ಎಂದು ಬಿಜೆಪಿ ಪ್ರತಿಕ್ರಿಯಿಸಿತ್ತು. ಈ ಆರೋಪಗಳನ್ನು ಡಿಎಂಕೆ ತಳ್ಳಿಹಾಕಿತ್ತು.
ಈ ವಿವಾದ ಜೋರಾಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಉದಯನಿಧಿ, 'ನನ್ನ ಹೇಳಿಕೆ ವಿಚಾರವಾಗಿ ಯಾವುದೇ ಕಾನೂನು ಕ್ರಮ ಎದುರಿಸಲು ಸಿದ್ಧ' ಎಂದು ಪುನರುಚ್ಚರಿಸಿದ್ದರು.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಂಗಳವಾರ ಪೋಸ್ಟ್ ಹಾಕಿದ್ದ ಉದಯನಿಧಿ, ಮಹಾಭಾರತದ ದ್ರೋಣಾಚಾರ್ಯರಿಗೆ ಸಂಬಂಧಿಸಿದ ಸಂಗತಿಯನ್ನು ಹಂಚಿಕೊಂಡಿದ್ದರು.
'ಯಾವಾಗಲೂ ಭವಿಷ್ಯದ ಪೀಳಿಗೆ ಕುರಿತು ಚಿಂತನೆ ನಡೆಸುವವರೇ ನಿಜವಾದ ಶಿಕ್ಷಕರು. ಶಿಷ್ಯನ ಹೆಬ್ಬೆರಳನ್ನು ಕೇಳದೇ ಜ್ಞಾನವನ್ನು ಧಾರೆ ಎರೆಯುವಂತಹ ಶಿಕ್ಷಕರೊಂದಿಗೆ ನಮ್ಮ ದ್ರಾವಿಡ ಚಳವಳಿ ಬಾಂಧವ್ಯ ಹೊಂದಿದೆ' ಎಂದು ಪೋಸ್ಟ್ ಮಾಡುವ ಮೂಲಕ ಉದಯನಿಧಿ ಅವರು ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ಹರಿತಗೊಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಚ್ಚರಿಕೆ ಹೆಜ್ಜೆ: ಭಾರತ ಮತ್ತು ಇಂಡಿಯಾ ಎಂಬ ವಿಚಾರವಾಗಿ ಎಚ್ಚರಿಕೆಯ ಪ್ರತಿಕ್ರಿಯೆ ನೀಡಲು ಬಿಜೆಪಿ ಪಾಳೆಯ ತೀರ್ಮಾನಿಸಿದೆ.
ಈ ವಿಷಯವಾಗಿ ಪಕ್ಷದ ವಕ್ತಾರರು ಮಾತ್ರ ಮಾತನಾಡಬೇಕು. ಅಲ್ಲದೆ, ವಿಷಯಾಂತರಕ್ಕೆ ಆಸ್ಪದ ನೀಡದೇ ಪ್ರತಿಕ್ರಿಯೆ ನೀಡಬೇಕು ಎಂದು ಪಕ್ಷದ ನಾಯಕರಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.