ನವದೆಹಲಿ: ದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣಗಳ ಅಲೆಯ ನಡುವೆ, ಗುರುವಾರ ಲೋಕಸಭೆಯಲ್ಲಿ ಆಡಳಿತರೂಡ ಪಕ್ಷದ ಸಂಸದರೊಬ್ಬರು, ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಸ್ಲಿಂ ಸಂಸದ, ಕುನ್ವರ್ ಡ್ಯಾನಿಶ್ ಅಲಿ ಅವರನ್ನು “ಭರ್ವಾ (ಪಿಂಪ್), “ಮುಲ್ಲಾ” “ಆತಂಕವಾದಿ”(ಭಯೋತ್ಪಾದಕ) ಮತ್ತು “ಉಗ್ರವಾದಿ” (ಉಗ್ರವಾದಿ) ಎಂದು ನಿಂದಿಸಿದ್ದಾರೆ.
ಭಾರತದ ಚಂದ್ರಯಾನ-3 ರ ಯಶಸ್ಸಿನ ಚರ್ಚೆಯ ವೇಳೆ ಮಾತನಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ, ಉಗ್ರಗಾಮಿ ಮತ್ತು ಪಿಂಪ್ ಎಂದು ಕರೆದಿದ್ದಾರೆ.
ಈ 'ಮುಲ್ಲಾ' ನನ್ನು ಹೊರಹಾಕಿ. "ಈ ಮುಲ್ಲಾ ಒಬ್ಬ ಭಯೋತ್ಪಾದಕ" ಎಂದು ಬಿಧುರಿ ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ರಮೇಶ್ ಬಿಧುರಿ ಅವರು ಬಿಎಸ್ಪಿ ಸಂಸದರನ್ನು ಹಿಂದಿಯಲ್ಲಿ ನಿಂದಿಸುವುದನ್ನು ಕಾಣಬಹುದು.
ಭಯಾನಕ ಸಂಗತಿಯೆಂದರೆ, ಇಬ್ಬರು ಬಿಜೆಪಿ ಸಂಸದರು ಮತ್ತು ಮಾಜಿ ಸಚಿವರಾದ ರವಿಶಂಕರ್ ಪ್ರಸಾದ್ ಹಾಗೂ ಹರ್ಷವರ್ಧನ್ ಅವರು ಬಿಧುರಿ ಅವರ ಮಾತಿಗೆ ನಗುತ್ತಾ, ತಮಾಷೆ ಮಾಡಿದ್ದಾರೆ.
ಇದೀಗ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಧ್ವೇಷಪೂರಿತ ಹೇಳಿಕೆ ವೈರಲ್ ಆಗುತ್ತಿದ್ದು, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ”ಮುಸ್ಲಿಮರನ್ನು, ಒಬಿಸಿಗಳನ್ನು ನಿಂದಿಸುವುದು ಬಿಜೆಪಿಯ ಅಂತರ್ಗತ ಸಂಸ್ಕೃತಿಯಾಗಿದೆ. ಈಗ ಹೆಚ್ಚಿನವರಿಗೆ ಅದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಮುಸ್ಲಿಮರು ತಮ್ಮ ಸ್ವಂತ ನೆಲದಲ್ಲಿ ಭಯದಿಂದ ಬದುಕುವ ಪರಿಸ್ಥಿತಿಯನ್ನು ನರೇಂದ್ರ ಮೋದಿ ಸರ್ಕಾರ ಸೃಷ್ಟಿಸಿದೆ. ಅವರು ನಗುತ್ತಾ ಎಲ್ಲವನ್ನು ಸಹಿಸಿಕೊಂಡಿದ್ದಾರೆ. ಕ್ಷಮಿಸಿ, ಇದು ಅಪರಾಧ ಎಂದು ಎಂದು ನಾನು ಕರೆಯುತ್ತೇನೆ. ಮಾ ಕಾಳಿ ನನ್ನ ಬೆನ್ನಿಗಿದ್ದಾರೆ” ಎಂದು ಬರೆದಿದ್ದಾರೆ.
ಏತನ್ಮಧ್ಯೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ, ಸದನದಲ್ಲಿ ಬಿಧುರಿ ನೀಡಿದ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು "ಗಂಭೀರವಾಗಿ ಪರಿಗಣಿಸಿ", ಭವಿಷ್ಯದಲ್ಲಿ ಅಂತಹ ಹೇಳಿಕೆ ನೀಡಿದರೆ "ಕಠಿಣ ಕ್ರಮ" ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪಿಟಿಐ ಪ್ರಕಾರ, ಕೇಂದ್ರ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ಅವರು ಬಿಧುರಿ ಮಾಡಿದ ಕಾಮೆಂಟ್‌ಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬಿಧುರಿ ಹೇಳಿದ್ದನ್ನು ತಾವು ಕೇಳಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಮಧ್ಯೆ, ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಶುಕ್ರವಾರ ಒತ್ತಾಯಿಸಿದೆ.