ಮುಂಬೈ: ಯುದ್ಧನೌಕೆ 'ಮಹೇಂದ್ರಗಿರಿ'ಯನ್ನು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಗೆ ಸಮರ್ಪಿಸಲಾಯಿತು.
ಮಜಗಾಂವ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ಅಭಿವೃದ್ಧಿಪಡಿಸಿರುವ ಈ ಯುದ್ಧನೌಕೆ ಜಲಾಂತರ್ಗಾಮಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
'ಪ್ರಾಜೆಕ್ಟ್ 17ಎ' ಅಡಿ ನೌಕಾಪಡೆಗೆ ಸಮರ್ಪಿಸಲಾಗಿರುವ ಕೊನೆಯ ಹಾಗೂ ಏಳನೇ ಯುದ್ಧನೌಕೆ ಇದಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಅತ್ಯುತ್ಯಮ ನಿರ್ವಹಣಾ ಸಿಸ್ಟಮ್‌ಗಳನ್ನು ಒಳಗೊಂಡಿದೆ. ಒಡಿಶಾದ ಪೂರ್ವ ಘಟ್ಟದಲ್ಲಿರುವ ಮಹೇಂದ್ರಗಿರಿ ಪರ್ವತದ ಹೆಸರನ್ನೇ ಈ ನೌಕೆಗೆ ಇಡಲಾಗಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಪತ್ನಿ ಸುದೇಶ ಅವರು ಈ ಯುದ್ಧನೌಕೆಯನ್ನು ಸಮರ್ಪಿಸಿದರು.
ಮುಖ್ಯ ಅತಿಥಿಯಾಗಿದ್ದ ಉಪರಾಷ್ಟ್ರಪತಿ ಧನಕರ್ ಮಾತನಾಡಿ, 'ಯುದ್ಧನೌಕೆ ಮಹೇಂದ್ರಗಿರಿ ತನ್ನ ಕಾರ್ಯಾಚರಣೆ ಆರಂಭಿಸಿದ ನಂತರ ಕಡಲ ರಕ್ಷಣೆಗೆ ಸಂಬಂಧಿಸಿ ದೇಶದ ಕೀರ್ತಿಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸುವ ವಿಶ್ವಾಸ ಇದೆ' ಎಂದರು.
ಮುಂಬೈನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಯುದ್ಧನೌಕೆ 'ಮಹೇಂದ್ರಗಿರಿ'ಯನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು - ಪಿಟಿಐ ಚಿತ್ರ'ಮತ್ತೊಂದು ಐಎಸಿ ಸೇರ್ಪಡೆಗೆ ಯೋಜನೆ'
ದೇಶೀಯವಾಗಿ ನಿರ್ಮಿತ ಯುದ್ಧವಿಮಾನ ವಾಹಕ ನೌಕೆಗಳನ್ನು (ಐಎಸಿ) ಮತ್ತೆ ಖರೀದಿಸುವ ಯೋಜನೆ ಇದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಹೇಳಿದ್ದಾರೆ. 'ಮಹೇಂದ್ರಗಿರಿ' ಯುದ್ಧನೌಕೆ ಸಮರ್ಪಣಾ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಐಎಸಿ ತಯಾರಿಕೆ ವಿಷಯದಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್ ಪರಿಣಿತಿ ಹೊಂದಿದ್ದು ಇದೇ ಮಾದರಿಯ ಮೂರನೇ ನೌಕೆಯನ್ನು ಹೊಂದಲು ಯೋಜಿಸಲಾಗಿದೆ' ಎಂದರು.