ಮುಂಬೈ: 'ಭಾರತ', 'ಇಂಡಿಯಾ' ಹೆಸರುಗಳ ಕುರಿತು ತುರುಸಿನ ಚರ್ಚಿನ ನಡೆದಿರುವ ಈ ಸಂದರ್ಭದಲ್ಲೇ ದೇಶದ ಹೆಸರಿನ ಕುರಿತು ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್, 'ನಮ್ಮ ದೇಶದ ಹೆಸರು ಭಾರತ. ಅದು ಭಾರತ ಎಂದೇ ಇರಬೇಕು' ಎಂದು ಪ್ರತಿಪಾದಿಸಿದೆ.
ಪುಣೆಯಲ್ಲಿ ನಡೆದ ಸಂಘಟನೆಯ ಮೂರು ದಿನಗಳ ಅಖಿಲ ಭಾರತೀಯ ಸಮನ್ವಯ ಬೈಠಕ್‌ನ ಸಮಾರೋಪ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಡಾ.ಮನಮೋಹನ ವೈದ್ಯ, ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೇಕರ್ ಈ ಪ್ರತಿಪಾದನೆ ಮಾಡಿದರು.
'ಪ್ರಾಚೀನ ಕಾಲದಿಂದಲೂ ನಮ್ಮ ದೇಶ ಭಾರತ ಎಂಬ ಹೆಸರಿನಿಂದಲೇ ಪ್ರಸಿದ್ಧ. ಭಾರತ ಎಂಬುದಕ್ಕೆ ಒಂದು ಸಾಂಸ್ಕೃತಿಕ ಮೌಲ್ಯ ಇದೆ. ಎರಡು ಹೆಸರುಗಳನ್ನು ಹೊಂದಿರುವ ಯಾವ ದೇಶವೂ ಇಲ್ಲ. ಹಾಗಾಗಿ, ನಮ್ಮ ದೇಶ ಭಾರತ, ಈ ಹೆಸರಿನಿಂದಲೇ ಕರೆಯಬೇಕು' ಎಂದು ಅವರು ಅಭಿಪ್ರಾಯಪಟ್ಟರು.
ಅರ್ಥ ತಿಳಿದುಕೊಳ್ಳಲಿ
'ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬಂತಹ ಹೇಳಿಕೆಗಳನ್ನು ನೀಡುತ್ತಿರುವವರು ಮೊದಲು ಈ ಪದದ ಅರ್ಥ ತಿಳಿದುಕೊಳ್ಳಬೇಕು' ಎಂದು ವೈದ್ಯ ಪ್ರತಿಪಾದಿಸಿದರು.
'ಸನಾತನ ಪದದ ಅರ್ಥ ಅನಂತ. ಇದುವೇ ಭಾರತದ ಆಧ್ಯಾತ್ಮಿಕ ಜೀವನ ಪದ್ಧತಿಯ ಬುನಾದಿ. ಸನಾತನ ಧರ್ಮದಿಂದಾಗಿಯೇ ವಿಶಿಷ್ಟ ಗುಣಗಳನ್ನು ಹೊಂದಿರುವ ಭಾರತ ರೂಪುಗೊಂಡಿದೆ' ಎಂದು ಹೇಳಿದರು.
'ಡಿಎಂಕೆ ನಾಯಕರ ಹೇಳಿಕೆಗಳು ರಾಜಕೀಯ ಪ್ರೇರಿತ' ಎಂದು ಹೇಳಿದ ವೈದ್ಯ, 'ಅನೇಕ ಜನರು ಸನಾತನ ಧರ್ಮವನ್ನು ನಾಶ ಮಾಡಲು ಯತ್ನಿಸಿದ್ದನ್ನು ಇತಿಹಾಸದುದ್ದಕ್ಕೂ ನೋಡಿದ್ದೇವೆ. ಇಂತಹ ಪ್ರಯತ್ನಗಳಲ್ಲಿ ಯಾರೂ ಯಶಸ್ವಿಯಾಗಿಲ್ಲ' ಎಂದರು.
'ಧರ್ಮಕ್ಕೆ ಯಾವಾಗ ಸಂಕಷ್ಟ ಎದುರಾಗುತ್ತದೆಯೋ ಅಂತಹ ಸಂದರ್ಭಗಳಲ್ಲಿ ಅದರ ರಕ್ಷಣೆಗೆ ನಾನು ಅವತಾರವೆತ್ತಿ ಬರುವೆ ಎಂದು ಭಗವಾನ್ ಕೃಷ್ಣ ಹೇಳಿದ್ದಾನೆ. ಆರ್‌ಎಸ್‌ಎಸ್ ಈ ಮಾರ್ಗದಲ್ಲಿಯೇ ಮುನ್ನಡೆಯುತ್ತಿದೆ' ಎಂದೂ ಹೇಳಿದರು.
'ಮಣಿಪುರದಲ್ಲಿನ ಪರಿಸ್ಥಿತಿ ಕುರಿತು ಕೆಲ ಪ್ರತಿನಿಧಿಗಳು ಸಮಾವೇಶದಲ್ಲಿ ಪ್ರಸ್ತಾಪಿಸಿದರು. ಕಣಿವೆ ರಾಜ್ಯದ ಪರಿಸ್ಥಿತಿ ಚಿಂತೆಗೀಡು ಮಾಡುವಂತಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೀಸಲಾತಿ ಕುರಿತ ಪ್ರಶ್ನೆಗೆ, 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಶಿಕ್ಷಣ, ಗೌರವ ದೃಷ್ಟಿಯಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ. ಸಂವಿಧಾನ ಆಧಾರದಲ್ಲಿ ಅವರಿಗೆ ಮೀಸಲಾತಿ ಒದಗಿಸಿ, ಅವರನ್ನು ನಮ್ಮೊಂದಿಗೆ ಕರೆದೊಯ್ಯುವುದು ಅಗತ್ಯ' ಎಂದರು.
ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೂರು ದಿನಗಳ ಬೈಠಕ್‌ನ ಅಧ್ಯಕ್ಷತೆ ವಹಿಸಿದ್ದರು.