ಮಹಬೂಬ್‌ನಗರ: ಕುತ್ತಿಗೆಯಲ್ಲಿ ಹಳದಿ ಬಣ್ಣ ಹೊಂದಿರುವ ಅಪರೂಪದ ಹಾವಿನ ಮರಿಯೊಂದು ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿದ್ದು, ನೋಡಿದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಮಹೆಬೂಬ್‌ನಗರ ಪಟ್ಟಣದ ಬೈಪಾಸ್ ರಸ್ತೆ ಬಳಿಯ ಅಕ್ಷರ ಕಾಲೋನಿಯಲ್ಲಿರುವ ಸ್ಥಳೀಯ ನಿವಾಸಿಯೊಬ್ಬರ ಮನೆಗೆ ಬುಧವಾರ ರಾತ್ರಿ ಹಾವೊಂದು ಮನೆಗೆ ನುಗ್ಗಿದೆ.
ಇದನ್ನು ಗಮನಿಸಿದ ಮನೆ ಮಾಲೀಕರು ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾ.ಸದಾಶಿವಯ್ಯ ಮನೆಯಲ್ಲಿ ಹಾವು ಬಂದಿರುವ ಬಗ್ಗೆ ಕೂಡಲೇ ಮಾಹಿತಿಯನ್ನು ನೀಡಿದ್ದಾರೆ.
ಹಾವಿನ ಬಗ್ಗೆ ತಿಳಿದ ಸದಾ ಶಿವಯ್ಯ ಕೂಡಲೇ ಸ್ಥಳಕ್ಕೆ ಬಂದು ಹಾವನ್ನು ಹಿಡಿದಿದ್ದು, ಇದೊಂದು ವಿಷರಹಿತ ಹಾವಾಗಿದೆ. ಇದು 'ಕೊಲುಬ್ರಿಡೆ' ಕುಟುಂಬಕ್ಕೆ ಸೇರಿದ ಹಾವು, 'ಲೈಕೋಡಾನ್ ಫೆವಿಕಾಲಿಸ್' ಇದರ ವೈಜ್ಞಾನಿಕ ಹೆಸರು ಎಂದು ಹೇಳಿದ್ದಾರೆ. ಆದರೆ ಮನೆಯ ಕುಟುಂಬಸ್ಥರೆಲ್ಲರೂ ಹಾವಿನ ಮರಿಯ ಕಂಡು ಆಶ್ಚರ್ಯಚಕಿರಾಗಿದ್ದರೂ ಸಹಿತ ಭಯದಿಂದಲೇ ಅದನ್ನು ದೂರದಿಂದ ವಿಕ್ಷೀಸುತ್ತಾ ನಿಂತಿದ್ದರು.
ಕುತ್ತಿಗೆಯ ಮೇಲೆ ದೊಡ್ಡ ಹಳದಿ ಚುಕ್ಕೆ ಇರುವುದರಿಂದ ಇದನ್ನು 'ಹಳದಿ ಕಾಲರ್ ವುಲ್ಫ್ ಸ್ನೇಕ್' ಎಂದು ಕರೆಯಲಾಗುತ್ತದೆ ಎಂದು ಉಪನ್ಯಾಸಕರು ತಿಳಿಸಿದ್ದಾರೆ. ಈ ಹಾವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮತ್ತು ತಮಿಳುನಾಡಿನ ಪೂರ್ವ ಘಟ್ಟಗಳು ಮತ್ತು ಒಣ ಭಾಗಗಳಲ್ಲಿ ಕಂಡುಬರುತ್ತದೆ.