ನವದೆಹಲಿ: ಮತದಾನ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಜೊತೆಗೆ ಬಳಕೆ ಮಾಡುವ ವಿವಿಪ್ಯಾಟ್ ಚೀಟಿಗಳ ಶೇ 100ರಷ್ಟು ಪರಿಶೀಲನೆಯು ವಾಸ್ತವವಾಗಿ ಸಾಧ್ಯವಿಲ್ಲ. ಒಂದು ವೇಳೆ ಇದಕ್ಕೆ ಅನುಮತಿ ನೀಡಿದರೆ ಹಳೆಯ ಬ್ಯಾಲೆಟ್ ಪದ್ಧತಿಗೆ (ಮತಪತ್ರಕ್ಕೆ ಮುದ್ರೆ ಒತ್ತಿ ಮತಪೆಟ್ಟಿಗೆಗೆ ಹಾಕುವುದು) ಮರಳಿದಂತಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಜೊತೆಗೆ, ತಾವು ನಿರ್ದಿಷ್ಟ ಅಭ್ಯರ್ಥಿಗೆ ಮತದಾನ ಮಾಡಿದ್ದೇವೆಯೇ ಎಂಬುದನ್ನು ವಿವಿಪ್ಯಾಟ್‌ಗಳ ಮೂಲಕ ಖಚಿತಪಡಿಸಿಕೊಳ್ಳುವುದು ಮತದಾರರ ಮೂಲಭೂತ ಹಕ್ಕಲ್ಲ ಎಂದು ಆಯೋಗವು ಪ್ರತಿಪಾದಿಸಿದೆ.
ಇವಿಎಂನಲ್ಲಿ ದಾಖಲಾಗಿರುವ ಮತಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದಾಗ ಮಾತ್ರ ವಿವಿಪ್ಯಾಟ್‌ಗಳಲ್ಲಿನ ಎಲ್ಲ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆ ಮತ್ತು ವಿವಿಪ್ಯಾಟ್ ಚೀಟಿಗಳ ಎಣಿಕೆ ನಡುವೆ ವ್ಯತ್ಯಾಸವಾಗಿದೆ ಎಂದು ತಾತ್ವಿಕವಾಗಿ ಹೇಳಬಹುದು. ಆದರೆ, ಮಾನವನ ದೋಷದ ಹೊರತಾಗಿ ಅಂತಹ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ಹೇಳಿದೆ.
ಸದ್ಯ ಒಂದು ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳಲ್ಲಿ ಮಾತ್ರವೇ ಇವಿಎಂನಲ್ಲಿ ದಾಖಲಾದ ಮತಗಳು ಮತ್ತು ವಿವಿಪ್ಯಾಟ್ ಚೀಟಿಗಳನ್ನು ತಾಳೆ ಮಾಡಿ ನೋಡಲು ಅನುಮತಿ ಇದೆ. ಎಲ್ಲಾ ಮತಗಟ್ಟೆಗಳಲ್ಲೂ ಈ ಪರಿಶೀಲನೆ ನಡೆಸಬೇಕು ಎಂದು ಕೋರಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಈ ಪ್ರಮಾಣ ಪತ್ರ ಸಲ್ಲಿಸಿದೆ. ಅಸೋಸಿಯೇಷನ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದಾರೆ.