ಬದಿಯಡ್ಕ: ದೇಶಾದ್ಯಂತ ಇಂದು ಕೃಷ್ಣನನ್ನು ಕೊಂಡಾಡುವ ದಿನವಾಗಿದೆ. ಬಾಲಲೀಲೆಯ ಮೂಲಕ ಎಲ್ಲರನ್ನೂ ಆಕರ್ಷಿಸುವ ಗುಣ ಕೃಷ್ಣನದ್ದು. ಧರ್ಮವನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸುವ ಕೃಷ್ಣನಂತಹ ಮಕ್ಕಳು ಸಮಾಜದಲ್ಲಿ ಬೆಳೆಯಬೇಕು. ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವಲ್ಲಿ ತಾಯಂದಿರು ಕಾಳಜಿವಹಿಸಬೇಕು ಎಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ಎಂ.ಎಲ್. ಹೇಳಿದರು.
ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಬದಿಯಡ್ಕ ಗಣೇಶ ಮಂದಿರದಲ್ಲಿ ಜರಗಿದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಸಭಾಕಾರ್ಯಕ್ರಮವನ್ನು ಬುಧವಾರ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಓರ್ವ ನಾಯಕ ಹೇಗಿರಬೇಕು ಎಂದು ಕೃಷ್ಣನನ್ನು ನೋಡಿ ಕಲಿಯಬೇಕು. ಮಕ್ಕಳು ಸ್ವಯಂ ನಿರ್ಧಾರವನ್ನು ತಳೆದುಕೊಳ್ಳುವ ಶಕ್ತಿಯನ್ನು ಅವರಲ್ಲಿ ತುಂಬುವ ಕಾರ್ಯ ನಡೆಯಬೇಕು. ಪ್ರಕೃತಿಯನ್ನು ಪೂಜಿಸುವ, ರಕ್ಷಿಸುವ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಯಾರೇ ಮಾತನಾಡಿದರೂ, ನಮ್ಮ ಧರ್ಮಕ್ಕೇ ಏನೂ ಅಪಾಯವಿಲ್ಲ. ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆದಾಗ ನಮ್ಮೊಳಗೆ ಧರ್ಮದ ಅರಿವು ಆಳವಾಗಿ ಬೇರೂರಲು ಸಾಧ್ಯ ಎಂದರು.
ಬದಿಯಡ್ಕ ಬಾಲಗೋಕುಲದ ಗೌರವಾಧ್ಯಕ್ಷ ಪೆರುಮುಂಡ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಾಲಗೋಕುಲ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಜಯರಾಮ ಶೆಟ್ಟಿ ಮಾತನಾಡಿ ವಿಷವುಳ್ಳ ಪೂತನಿಯರು, ಮೋಸವನ್ನು ಮಾಡುವ ಮಾರೀಚರು ನಮ್ಮ ಸಮಾಜದಲ್ಲಿ ವಿಷದ ಬೀಜವನ್ನು ಬಿತ್ತುವುದನ್ನು ಸಮರ್ಥವಾಗಿ ಎದುರಿಸುವ ಸವಾಲು ನಮ್ಮಲ್ಲಿದೆ. ಅಧರ್ಮದಿಂದ ಧರ್ಮವನ್ನು ರಕ್ಷಿಸಬೇಕಿದೆ ಎಂದರು. ಬಾಲಗೋಕುಲ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ರಮಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಘ್ನೇಶ್ ಬಾಲಗೋಕುಲದ ಮಕ್ಕಳು ಪ್ರಾರ್ಥನೆಯನ್ನು ಹಾಡಿದರು. ಬಾಲಗೋಕುಲ ಬದಿಯಡ್ಕ ತಾಲೂಕ್ ಪ್ರಮುಖ್ ಯೋಗೀಶ್ ಪೊಡಿಪ್ಪಳ್ಳ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ಕೆ. ಸ್ವಾಗತಿಸಿ, ಕಾರ್ಯದರ್ಶಿ ಶಾಂತಕುಮಾರಿ ದಿನೇಶ್ ವಂದಿಸಿದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.