ಕೋಝಿಕ್ಕೋಡ್: ನಿಪಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರು ಗುಣಮುಖರಾಗಿದ್ದಾರೆ. ನಿಪಾದಿಂದ ಮೃತಪಟ್ಟ ವ್ಯಕ್ತಿಯ ಒಂಬತ್ತು ವರ್ಷದ ಪುತ್ರ ಮತ್ತು ಸಹೋದರ ಚೇತರಿಸಿಕೊಂಡಿದ್ದಾರೆ.
ನಿಪಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಪರೀಕ್ಷೆ ಫಲಿತಾಂಶ ನೆಗೆಟಿವ್ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಂಬತ್ತು ವರ್ಷದ ಮಗು ಆರು ದಿನಗಳ ಕಾಲ ವೆಂಟಿಲೇಟರ್‍ನಲ್ಲಿತ್ತು. ಮಗುವಿನ ಜೀವ ಉಳಿಸಿದ್ದು ದೊಡ್ಡ ಸಾಧನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ದಿನಗಳ ಕಾಲ ವೆಂಟಿಲೇಟರ್‍ನಲ್ಲಿದ್ದ ನಿಪಾ ರೋಗಿಯು ಚೇತರಿಸಿಕೊಂಡಿರುವುದು ವಿಶ್ವದಲ್ಲಿ ಇದೇ ಮೊದಲು. ನಾಲ್ವರು ಚೇತರಿಸಿಕೊಂಡಿದ್ದು, ಕೇರಳವನ್ನು ತಲ್ಲಣಗೊಳಿಸಿದ್ದ ನಿಪಾ ಭೀತಿ ದೂರವಾಗಿದೆ. ಜಿಲ್ಲೆಯಲ್ಲಿ ನಿಪಾ ನಿಯಂತ್ರಣದಲ್ಲಿದ್ದು, ಕಂಟೈನ್‍ಮೆಂಟ್ ವಲಯಗಳ ಮೇಲಿನ ನಿಬರ್ಂಧಗಳನ್ನೂ ಹಿಂಪಡೆಯಲಾಗಿದೆ.