ಕಾಸರಗೋಡು: ಜನರಿಂದ ರೂಪುಗೊಂಡಿರುವ ಸಹಕಾರಿ ಬ್ಯಾಂಕ್‍ಗಳು ಕೃಷಿಕರ ಬೆನ್ನೆಲುಬಾಗಿದ್ದು, ಈ ಕ್ಷೇತ್ರವನ್ನು ನಾಶ ಮಾಡುವ ಯಾವುದೇ ಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲೆಯ ಕುಂಡಂಕುಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಬೇಡಡ್ಕ ಕೃಷಿಕರ ಸೇವಾ ಸಹಕಾರಿ ಬ್ಯಾಂಕ್‍ನ ಕೇಂದ್ರ ಕಚೇರಿ ಕಟ್ಟಡ ಮತ್ತು ರೈತರ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಕರ ವಿಶ್ವಾಸಾರ್ಹತೆಯ ಕೇಂದ್ರವಾಗರುವ ಸಹಕಾರಿ ವಲಯದ ಅಭಿವೃದ್ಧಿ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ದೇಶವು ಜಾಗತೀಕರಣದ ನೀತಿಯನ್ನು ಒಪ್ಪಿಕೊಂಡಾಗ, ಈ ಮನೋಭಾವವು ಬದಲಾಗಲು ಕಾರಣವಾಯಿತು. ಕೇರಳದ ಸಹಕಾರಿ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳಿಗೆ ಪೈಪೋಟಿ ನೀಡುವಷ್ಟು ಪ್ರಬಲವಾಗಿ ಬೆಳೆದು ನಿಂತಿದೆ. ನೋಟು ಅಮಾನ್ಯೀಕರಣದ ಅವಧಿಯಲ್ಲಿ, ಕೇರಳ ಕ್ಯಾಬಿನೆಟ್ ತನ್ನ ಸಹಯೋಗಿಗಳೊಂದಿಗೆ ಸಹಕಾರಿ ಬ್ಯಾಂಕ್‍ಗಳನ್ನು ರಕ್ಷಿಸಲು ಮುಂದೆ ಬಂದಿತ್ತು. ಇಂತಹ ಸಹಕಾರಿ ಕ್ಷೇತ್ರವನ್ನು ನಾಶ ಮಾಡುವ ದುಷ್ಟ ಉದ್ದೇಶವನ್ನು ಸರ್ಕಾರ ಎಂದಿಗೂ ಸಹಿಸದು ಎಂದು ತಿಳಿಸಿದರು.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಕೇರಳ ಬ್ಯಾಂಕ್‍ನ 'ಸಮಗ್ರ ಪಿಎಸಿಎಸ್'ಯೋಜನೆಯಡಿ 80 ಲಕ್ಷ ಹಾಗೂ ನಬಾರ್ಡ್‍ನ ಎಐಎಫ್ ಯೋಜನೆಯಡಿ 120 ಲಕ್ಷ ರೂಪಾಯಿ ವೆಚ್ಚ ಮಾಡಿ ಕಟ್ಟಡ ನಿರ್ಮಾಣ ಪೂರ್ತಿಗೊಳಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮುಖ್ಯ ಶಾಖೆಯನ್ನು ಉದ್ಘಾಟಿಸಿದರು. ಮೀಟಿಂಗ್ ಹಾಲ್ ಉದ್ಘಾಟನೆಯನ್ನು ಕೇರಳ ಸಹಕಾರಿ ಹೂಡಿಕೆ ಖಾತರಿ ಮಂಡಳಿ ಉಪಾಧ್ಯಕ್ಷ ಕೆ.ಪಿ.ಸತೀಶ್ಚಂದ್ರನ್, ಸೋಲಾರ್ ವ್ಯವಸ್ಥೆಯನ್ನು ಕೇರಳ ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ, ರೈತ ತರಬೇತಿ ಕೇಂದ್ರವನ್ನು ನಬಾರ್ಡ್ ಎಜಿಎಂ ದಿವ್ಯಾ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿಬಾಲಕೃಷ್ಣನ್, ಡಾಟಾ ಸೆಂಟರ್ ಜಿಲ್ಲಾ ಸಹಕಾರ ಸಂಘದ ಜಂಟಿ ನಿಬಂಧಕಿ ಲಸಿತಾ ಉದ್ಘಾಟಿಸಿದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಪಾಯಂ ವರದಿ ಮಂಡಿಸಿದರು. ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಬೇಡಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್ ಮೊದಲಾದವರು ಉಪಸ್ಥಿತರಿದ್ದರು.