ಕೋಟಾ: ರಾಜಸ್ಥಾನದ ಕೋಟಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
'ಸೋಲಿನ ಬಗ್ಗೆ ಭಯಪಡಬಾರದು, ಜಗತ್ತಿನಲ್ಲಿ ಯಾವುದೇ ದೊಡ್ಡ ಕೆಲಸವನ್ನು ಒಂದೇ ಪ್ರಯತ್ನದಲ್ಲಿ ಮಾಡಲಾಗಿಲ್ಲ' ಎಂದರು.
ಚಂದ್ರಯಾನ-2ರ ವೈಫಲ್ಯ ಮತ್ತು ಚಂದ್ರಯಾನ-3ರ ಯಶಸ್ಸನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಅರ್ಹತೆಗೆ ತಕ್ಕಂತೆ ಜೀವನದಲ್ಲಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ ಅವರಂತಹ ಉದ್ಯಮಿಗಳ ಉದಾಹರಿಸಿದ ಅವರು, ಶೈಕ್ಷಣಿಕ ಪದವಿ ಉತ್ತಮವಾದದ್ದು, ಆದರೆ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಉತ್ಸಾಹವು ಪದವಿಯಲ್ಲಿ ಇರುವುದಿಲ್ಲ ಎಂದರು.
ಯೋಚನೆ, ವರ್ತನೆ ಸಣ್ಣ ಕಾಲುವೆಯಂತಿರದೆ ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುವ ನದಿಯಂತಾದರೆ ಅದರ ಸುತ್ತಲೂ ನಾಗರಿಕತೆ ಬೆಳೆಯಬಲ್ಲದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.