ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ 13 ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಗಾಗಿ ಶೋಧನಾ ಸಮಿತಿ ರಚಿಸಲು ವಿಜ್ಞಾನಿಗಳು, ತಂತ್ರಜ್ಞರು, ಶಿಕ್ಷಣ ತಜ್ಞರು ಸೇರಿ ಪ್ರಮುಖರ ಪಟ್ಟಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ 13 ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಗಾಗಿ ಶೋಧನಾ ಸಮಿತಿ ರಚಿಸಲು ವಿಜ್ಞಾನಿಗಳು, ತಂತ್ರಜ್ಞರು, ಶಿಕ್ಷಣ ತಜ್ಞರು ಸೇರಿ ಪ್ರಮುಖರ ಪಟ್ಟಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ಕುಲಪತಿಗಳ ನೇಮಕ ಕುರಿತಂತೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟವನ್ನು ಗಣನೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ಕುಲಪತಿಗಳ ಆಯ್ಕೆಗೆ ಶೋಧನಾ ಸಮಿತಿ ರಚಿಸುವ ತೀರ್ಮಾನವನ್ನು ಸೆಪ್ಟೆಂಬರ್ 15ರಂದು ತೆಗೆದುಕೊಂಡಿತ್ತು.
ಪ್ರತಿ ವಿಶ್ವವಿದ್ಯಾಲಯಕ್ಕೂ ತಲಾ ಮೂವರಿಂದ ಐವರ ಹೆಸರನ್ನು ಪ್ರತ್ಯೇಕವಾಗಿ ಸೂಚಿಸಬೇಕು ಎಂದು ರಾಜ್ಯಪಾಲರು, ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸುಪ್ರೀಂ ಕೋರ್ಟ್ ಕೇಳಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಅವರನ್ನು ಒಳಗೊಂಡ ಪೀಠವು ಈ ಸೂಚನೆ ನೀಡಿದೆ.
'ವಿ.ವಿಗಳ ಕುಲಾಧಿಪತಿಯಾಗಿ ರಾಜ್ಯಪಾಲರು ಹಂಗಾಮಿ ಕುಲಪತಿ ನೇಮಿಸಿರುವುದು ನಿಯಮಬಾಹಿರವಲ್ಲ' ಎಂದು ಕಲ್ಕತ್ತ ಹೈಕೋರ್ಟ್ ಜೂನ್ 28ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕಲ್ಕತ್ತ, ಕಲ್ಯಾಣಿ ಮತ್ತು ಜಾದವಪುರ್ ವಿಶ್ವವಿದ್ಯಾಲಯ ಸೇರಿ 11 ವಿ.ವಿ.ಗಳಿಗೆ ಜೂನ್ 1ರಂದು ಹಂಗಾಮಿ ಕುಲಪತಿಗಳನ್ನು ನೇಮಿಸಲಾಗಿತ್ತು. ಈ ನೇಮಕ ಪ್ರಕ್ರಿಯೆಯನ್ನು ಪ್ರಶ್ನಿಸಿ ಸನತ್ ಕುಮಾರ್ ಘೋಷ್ ಅವರು ಕೋರ್ಟ್‌ನ ಮೆಟ್ಟಿಲೇರಿದ್ದರು.
ಕುಲಪತಿಗಳ ನೇಮಕ ಕುರಿತ ಪ್ರಸ್ತಾವಗಳು ಉನ್ನತ ಶಿಕ್ಷಣ ಸಚಿವರ ಪರಿಶೀಲನೆಯಲ್ಲಿವೆ. ಅವರ ಅಭಿಪ್ರಾಯವನ್ನೂ ಆಲಿಸದೇ ಕುಲಾಧಿಪತಿಗಳು ಹಂಗಾಮಿ ಕುಲಪತಿಗಳನ್ನು ನೇಮಕ ಮಾಡಿದ್ದಾರೆ ಎಂದು ಆರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು.