ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆ ಅಂಚಿಗೆ ಅಳವಡಿಸುತ್ತಿರುವ ಸೂಚನಾಫಲಕಗಳು ಕೆಲವು ಪ್ರದೇಶಗಳಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗುತ್ತಿದೆ. ಕುಂಬಳೆಯಿಂದ ಆರಂಭಗೊಂಡು, ಸೀತಾಂಗೋಳಿ, ಬದಿಯಡ್ಕ, ನಾರಂಪಾಡಿ, ಮವ್ವಾರು ಹಾದಿಯಾಗಿ ಮುಳ್ಳೇರಿಯ ಸಂಪರ್ಕ ಕಲ್ಪಿಸುವ ಪ್ರಸಕ್ತ ರಸ್ತೆಯನ್ನು 160ಕೋಟಿಗೂ ಹೆಚ್ಚಿನ ಮೊತ್ತ ಬಳಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿ ಬಹುತೇಕ ಪೂರ್ತಿಗೊಂಡಿದೆ.
ಈ ಮಧ್ಯೆ ರಸ್ತೆ ಅಂಚಿಗೆ ಸೂಚನಾಫಲಕಗಳನ್ನು ಅಳವಡಿಸಲಾಗುತ್ತಿದ್ದು, ಇದರಲ್ಲಿ ಬದಿಯಡ್ಕದಿಂದ ಮುಳ್ಳೇರಿಯ ಹಾದಿ ಮಧ್ಯೆ ಕೆಲವೊಂದು ಫಲಕಗಳು ಚಾಲಕರು ಹಾಗೂ ಪ್ರಯಾಣಿಕರಲ್ಲಿ ಗೊಂದಲಕ್ಕೂ ಕಾರಣವಾಗುತ್ತಿದೆ. ಬಾರಡ್ಕ ಪ್ರದೇಶದಲ್ಲಿ ಅಳವಡಿಸಿರುವ ಸೂಚನಾಫಲಕಗಳಲ್ಲಿ ಬದಿಯಡ್ಕ-ಕಾಸರಗೋಡು ನಡುವಿನ ಕೆಲವೊಂದು ಪ್ರದೇಶಕ್ಕೆ ಬಳಸುದಾರಿಯಾಗಿ ತೆರಳುವ ಹಾದಿಯನ್ನು ಗುರುತಿಸಲಾಗಿದೆ. ಇನ್ನು ಮುಳ್ಳೇರಿಯದಿಂದ ಬದಿಯಡ್ಕ ತೆರಳುವ ರಸ್ತೆಯಲ್ಲಿ ಬದಿಯಡ್ಕ ಮೇಲಿನಪೇಟೆ ಸನಿಹ ಏತಡ್ಕ ತೆರಳಲು ಬಾಣದಗುರುತಿನೊಂದಿಗೆ ಫಲಕ ಅಳವಡಿಸಿಲಾಗಿದೆ. ಏತಡ್ಕಕ್ಕೆ ತೆರಳುವ ಸೂಚನಾ ಫಲಕವನ್ನು ವಿದ್ಯಾಗಿರಿ ರಸ್ತೆ ಅಂಚಿಗೆ ಅಳವಡಿಸುವ ಬದಲು ಮುಳ್ಳೇರಿಯ ರಸ್ತೆಗೆ ಅಳವಡಿಸಿರುವುದೂ ಗೊಂದಲಕ್ಕೆ ಕಾರಣವಾಗುತ್ತಿದೆ. ಇನ್ನು ಬದಿಯಡ್ಕದಿಂದ ರಾಜ್ಯ ಹೆದ್ದಾರಿ ಚೆರ್ಕಳ ಹಾದಿಯಾಗಿ ಕಾಸರಗೋಡಿಗೆ ತೆರಳುವ ಹಾದಿಯಲ್ಲಿನ ಕೆಲವೊಂದು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದು, ಈ ಜಾಗದ ಹೆಸರನ್ನು ಬಾಣದ ಗುರುತಿನೊಂದಿಗೆ ಸೂಚನಾಫಲಕ ಅಳವಡಿಸಲಾಗಿದೆ. ಇವೆಲ್ಲವೂ ಗೊಂದಲಕ್ಕೆ ಕಾರಣವಾಗುತ್ತಿರುವುದಾಗಿ ಚಾಲಕರು ಹಾಗೂ ಸ್ಥಳೀಯರು ದೂರಿದ್ದಾರೆ.
ಬದಿಯಡ್ಕ ಪೇಟೆಯಲ್ಲೂ ಕಾಮಗಾರಿಯಲ್ಲಿ ಕೆಲವೊಂದು ಲೋಪಗಳಿರುವುದಾಗಿ ಸ್ಥಳೀಯ ವ್ಯಾಪಾರಿಗಳು ದೂರಿದ್ದಾರೆ. ಪೇಟೆಯಲ್ಲಿರುವ ನಿಲ್ದಾಣದೊಳಗೆ ಪ್ರವೇಶಿಸಬೇಕಾದರೆ ಬಸ್‍ಗಳು ಪೊಲೀಸ್ ಠಾಣೆ ವರೆಗೂ ಸಂಚರಿಸಿ ಸುತ್ತುಬಳಸಿ ತೆರಳಬೇಕಾಗಿದೆ. ಇನ್ನು ಚರಂಡಿಗಳು ರಸ್ತೆಯಿಂದ ಎತ್ತರದಲ್ಲಿದ್ದು, ಇದಕ್ಕೆ ಮಳೆನೀರು ಸರಾಗವಾಗಿ ಹರಿಯುವಲ್ಲೂ ತಡೆಯುಂಟಾಗುತ್ತಿದೆ. ಪಾದಚಾರಿಗಳಿಗೆ ರಸ್ತೆ ಅಡ್ಡದಾಟಲು ಝೀಬ್ರಾ ಗುರುತುಗಳಿದ್ದರೂ, ರಸ್ತೆವಿಭಾಜಕದಲ್ಲಿ ಹಾದಿಯಿಲ್ಲದಾಗಿದೆ. ಪೇಟೆಯಲ್ಲಿ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವಂತೆಯೂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಕಾಸರಗೋಡು-ಸುಳ್ಯ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಕುಂಬಳೆಯಿಂದ ಸೀತಾಂಗೋಳಿ-ಬದಿಯಡ್ಕ-ನಾರಂಪಾಡಿ ಮೂಲಕ ಮುಳ್ಳೇರಿಯಕ್ಕೆ 28ಕಿ.ಮೀ ದೂರದ ಈ ರಸ್ತೆಯನ್ನು ಕೇರಳ ಸ್ಟೇಟ್ ಟ್ರಾನ್ಸ್‍ಪೋರ್ಟ್ ಪ್ರಾಜೆಕ್ಟ್(ಕೆಎಸ್‍ಟಿಪಿ)ನೇತೃತ್ವದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕುಂಬಳೆಯಿಂದ ಮುಳ್ಳೇರಿಯವರೆಗೆ 40ಕ್ಕೂ ಹೆಚ್ಚು ಪ್ರಯಾಣಿಕರ ತಂಗುದಾಣಗಳನ್ನೂ ನಿರ್ಮಿಸಲಾಗಿದೆ.
ಅಭಿಮತ:
ಕೇರಳ ರೀಬ್ಯುಲ್ಡ್ ಯೋಜನೆಯನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರಸ್ತೆಕಾಮಗಾರಿ ನಡೆಸುತ್ತಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೂಚನಾಫಲಕ ಹಾಗೂ ಬದಿಯಡ್ಕ ಪೇಟೆಯಲ್ಲಿ ಕಾಮಗಾರಿಯಲ್ಲಿ ಲೋಪಗಳಿದ್ದಲ್ಲಿ, ಈ ಬಗ್ಗೆ ಗಮನಹರಿಸಲಾಗುವುದು. ಕಾಮಗಾರಿ ಪೂರ್ತಿಗೊಳಿಸುವ ಮೊದಲು ಇಂತಹ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
-ಆಶಿಶ್, ಸಹಾಯಕ ಮಹಾ ಅಭಿಯಂತ
ಕೆಎಸ್‍ಡಿಪಿ, ಕಣ್ಣೂರು