ಇಸ್ಲಾಮಾಬಾದ್: ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿದೆ. ಈ ಹೆಚ್ಚಳದೊಂದಿಗೆ ಬೆಲೆಗಳು ಹೊಸ ದಾಖಲೆಯ ಮಟ್ಟವನ್ನು ತಲುಪಿವೆ.
ತೀವ್ರ ನಗದು ಕೊರತೆ ಎದುರಿಸುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 330 ರೂ.ಗೆ ಏರಿದೆ. ಇಲ್ಲಿನ ಹಣದುಬ್ಬರ ದರ ಈಗಾಗಲೇ ಎರಡಂಕಿಗೆ ತಲುಪಿದೆ.
ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರ ಒಪ್ಪಿಗೆ ಪಡೆದ ನಂತರ, ಹಣಕಾಸು ಸಚಿವಾಲಯ ಶುಕ್ರವಾರ ರಾತ್ರಿ ಪೆಟ್ರೋಲ್ ಬೆಲೆಯನ್ನು 26.02 ರೂಪಾಯಿ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 17.34 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿದೆ.
ಇದರ ನಂತರ, ಪೆಟ್ರೋಲ್ ಮತ್ತು 'ಹೈ-ಸ್ಪೀಡ್' ಡೀಸೆಲ್ (ಎಚ್‌ಎಸ್‌ಡಿ) ಬೆಲೆಗಳು ಲೀಟರ್‌ಗೆ 330 ರೂ.ಗಿಂತ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 330 ರೂ.ಗೆ ತಲುಪಿರುವುದು ಮಾನಸಿಕ ತಡೆಯನ್ನು ಮುರಿದಂತೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಆಗಸ್ಟ್‌ನಲ್ಲಿ ಹಣದುಬ್ಬರವು ಶೇಕಡಾ 27.4ಕ್ಕಿಂತ ಹೆಚ್ಚು ಏರಿಕೆಯಾದ ನಂತರ ಇಂಧನ ಬೆಲೆಯಲ್ಲಿ ಹೆಚ್ಚಳವಾಗಿದೆ. ಈ ಹಿಂದೆ ಸೆಪ್ಟೆಂಬರ್ 1ರಂದು ಸಹ ಉಸ್ತುವಾರಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 14 ರೂಪಾಯಿಗೆ ಏರಿಸಿದೆ.
ನೆರೆಯ ದೇಶದಲ್ಲಿ ಹದಿನೈದು ದಿನದೊಳಗೆ ಎರಡು ಬಾರಿ ಈ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಅಲ್ಲಿನ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ. ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸೇವಾ ವಾಹನಗಳಲ್ಲಿ ಪೆಟ್ರೋಲ್ ಮತ್ತು HSD ಅನ್ನು ಬಳಸಲಾಗುತ್ತದೆ.