ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ.
ಹೊಸ ಸಂಸತ್ ಕಟ್ಟಡದಲ್ಲಿ ಮೊದಲ ಮಸೂದೆಯಾಗಿ ಮಂಡನೆಯಾಗಿರುವ ಮಹಿಳಾ ಮೀಸಲಾತಿ ಮಸೂದೆಯು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲು ಅನುವು ಮಾಡಿಕೊಡುತ್ತದೆ.
ಮಸೂದೆಗೆ 'ನಾರಿ ಶಕ್ತಿ ವಂದನಾ ಅಧಿನಿಯಮ' ಎಂದು ಹೆಸರಿಡಲಾಗಿದೆ.
ಹಲವು ಪಕ್ಷಗಳು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಗೆ ಒತ್ತಾಯಿಸುತ್ತಿರುವುದರಿಂದ, ಮಸೂದೆಯು ಸುಗಮವಾಗಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಸೋಮವಾರ ಮಸೂದೆಗೆ ಅನುಮೋದನೆ ನೀಡಿದೆ. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗಿಯಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದುಹೇಳಿದರು.
ದೇಶದಲ್ಲಿ ಮಹಿಳೆಯರ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ವಿವಿಧ ವಲಯಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಯನ್ನು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು.
15 ವರ್ಷಗಳ ಅವಧಿಗೆ ಮಹಿಳಾ ಮೀಸಲಾತಿಯನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ, ಎಸ್‌ಸಿ/ಎಸ್‌ಟಿ ಮೀಸಲಾತಿ ಸಹ ಇರಲಿದೆ. ಕ್ಷೇತ್ರವಾರು ಮಹಿಳಾ ಮೀಸಲಾತಿ ವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕವೇ ಕಾನೂನು ಜಾರಿಗೆ ಬರಲಿದೆ.
ಸಂವಿಧಾನದ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ, 2023, ಪೂರಕ ಪಟ್ಟಿಯ ಮೂಲಕ ಲೋಕಸಭೆಯಲ್ಲಿ ಮಸೂದೆಯನ್ನು ಪಟ್ಟಿ ಮಾಡಲಾಗಿದೆ.
ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯ ಪ್ರಮಾಣದಲ್ಲಿದೆ. ಆದರೆ, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.
ಮಹಿಳೆಯರು ವಿಭಿನ್ನ ದೃಷ್ಟಿಕೋನಗಳನ್ನು ತರುತ್ತಾರೆ ಮತ್ತು ಶಾಸಕಾಂಗ ಚರ್ಚೆಗಳು ಹಾಗೂ ನಿರ್ಧಾರಗಳ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುತ್ತಾರೆ ಎಂದು ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ ಶೇ 15ರಷ್ಟಿದ್ದು, ವಿಧಾನಸಭೆಗಳಲ್ಲಿ ಮಹಿಳಾ ಶಾಸಕರ ಸಂಖ್ಯೆ ಶೇ 10ಕ್ಕಿಂತ ಕಡಿಮೆ ಇದೆ.