ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೋಮವಾರ ಮುಂಜಾನೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 70 ಕಿಲೋಮೀಟರ್ ಆಳದಲ್ಲಿ ಭಾರತೀಯ ಕಾಲಮಾನ 01:29:06ಕ್ಕೆ ಭೂಕಂಪ ಸಂಭವಿಸಿದೆ.
ದೇಶದಲ್ಲಿ ಭೂಕಂಪದ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಎನ್‍ಸಿಎಸ್ ಎನ್ನುವುದು ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. ಇದು ದಿನದ 24 ಗಂಟೆಯೂ ಭೂಕಂಪನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ದೇಶಾದ್ಯಂತ 155 ಕೇಂದ್ರಗಳ ಜಾಲವನ್ನು ನಿರ್ವಹಿಸುತ್ತದೆ.
ಸಮುದ್ರದಲ್ಲಿ ಭೂಮಿ ಕಂಪಿಸಿದರೆ ಏನಾಗುತ್ತೆ?
ಸಮುದ್ರದ ಆಳದಲ್ಲಿ ಭೂಕಂಪನ ಅಥವಾ ಜ್ವಾಲಾಮುಖಿ ಸ್ಫೋಟ ಆದಾಗ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇರುತ್ತದೆ. ಆದರೆ ಇದು ಭೂಕಂಪ/ಜ್ವಾಲಾಮುಖಿ ಸ್ಫೋಟದ ತೀವ್ರತೆಯ ಮೇಲೆ ನಿರ್ಭರವಾಗಿರುತ್ತದೆ. ಈ ಪ್ರಕರಣದಲ್ಲಿ ಅದೃಷ್ಟವಶಾತ್ 4.4 ತೀವ್ರತೆಯ ಭೂಕಂಪನ ನಡೆದಿದ್ದು ಇದರಿಂದ ಭಾರಿ ಪ್ರಮಾಣದ ಹಾನಿ ನಡೆಯುವುದಿಲ್ಲ. ರಿಕ್ಟರ್ ಮಾಪಕದಲ್ಲಿ 4-4.9 ತೀವ್ರತೆಯ ಭೂಕಂಪಗಳನ್ನು 'ಲೈಟ್' ಎಂದು ಪರಿಗಣಿಸಲಾಗುತ್ತದೆ. ಇವನ್ನು ಅನುಭವಿಸಲು ಸಾಧ್ಯವಾದರೂ ಹೆಚ್ಚಿನ ಅಪಾಯಗಳನ್ನು ಉಂಟುಮಾಡುವುದಿಲ್ಲ.ಭೂಕಂಪದ ಸಮಯದಲ್ಲಿ ಏನು ಮಾಡಬೇಕು?
ಭೂಕಂಪದ ಸಂದರ್ಭದಲ್ಲಿ ಯಾವಾಗಲೂ ಶಾಂತವಾಗಿದ್ದು ಎಲ್ಲರೂ ಪಾರಾಗುವುದಾಗಿ ಇತರರಿಗೆ ಭರವಸೆ ನೀಡಬೇಕು. ಭೂಕಂಪದ ಸಮಯದಲ್ಲಿ, ಯಾವಾಗಲೂ ತೆರೆದ ಸ್ಥಳ, ಕಟ್ಟಡಗಳಿಂದ ದೂರದ ಯಾವುದಾರೂ ಸುರಕ್ಷಿತ ಸ್ಥಳವನ್ನು ಹುಡುಕಬೇಕು.
ಮನೆಯೊಳಗೆ ಇರುವವರು ಮೇಜು ಅಥವಾ ಹಾಸಿಗೆಯ ಕೆಳಗೆ ನುಸುಳಬೇಕು. ಈ ಸಂದರ್ಭದಲ್ಲಿ ಗಾಜಿನ ಕಿಟಕಿಗಳಿಂದ ಹಾಗೂ ಇತರೆ ಗಾಜಿನ ವಸ್ತುಗಳಿಂದ ದೂರವಿರಬೇಕು. ಭೂಕಂಪ ನಡೆಯುವಾಗ ಶಾಂತವಾಗಿರಬೇಕು. ಭೂಂಪ ನಿಂತ ಮೇಲೆ ಕಟ್ಟಡದಿಂದ ಹೊರಗೆ ಹೋಗಲು ಆತುರಪಡಬಾರದು. ಏಕೆಂದರೆ ಅದು ಕಾಲ್ತುಳಿತಕ್ಕೆ ಕಾರಣವಾಗಬಹುದು.
ಹೊರಗೆ ಇದ್ದರೆ, ಕಟ್ಟಡಗಳು ಮತ್ತು ಯುಟಿಲಿಟಿ ತಂತಿಗಳಿಂದ ದೂರ ಸರಿಯಬೇಕು. ಅದಲ್ಲದೇ ಚಲಿಸುವ ವಾಹನಗಳನ್ನು ತಕ್ಷಣ ನಿಲ್ಲಿಸಬೇಕು. ಈ ಸಂದರ್ಭ ಎಲ್ಲಾ ಸಾಕುಪ್ರಾಣಿಗಳನ್ನು ಮುಕ್ತಗೊಳಿಸುವುದನ್ನು ನೆನಪಿಟ್ಟುಕೊಳ್ಳಬೇಕು, ಇದರಿಂದ ಅವು ಓಡಿಹೋಗಿ ತಮ್ಮ ಪ್ರಾಣ ಉಳಿಸಿಕೊಳ್ಳಬಹುದು.