ನವದೆಹಲಿ: ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ವಿಷಯವಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಶನಿವಾರ ತನ್ನ ಮೊದಲ ಸಭೆ ನಡೆಸಿದ್ದು, ರಾಜಕೀಯ ಪಕ್ಷಗಳು ಹಾಗೂ ಕಾನೂನು ಆಯೋಗದಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದೆ.
ದೇಶಾದ್ಯಂತ ಲೋಕಸಭಾ ಚುನಾವಣೆಯಿಂದ ಪಂಚಾಯತ್ ಚುನಾವಣೆ ವರೆಗೂ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಶಿಫಾರಸ್ಸುಗಳನ್ನು ನೀಡುವಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ 8 ಸದಸ್ಯರು ಇರುವ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಕೇಂದ್ರ ಸರ್ಕಾರ ಸೆ.02 ರಂದು ಅಧಿಸೂಚನೆ ಪ್ರಕಟಿಸಿತ್ತು.
ಗೃಹ ಸಚಿವ ಅಮಿತ್ ಶಾ, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್ ಕೆ ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಸಭೆಯಲ್ಲಿ ಭಾಗವಹಿಸಿದ್ದರು.
ಖ್ಯಾತ ವಕೀಲ ಹರೀಶ್ ಸಾಳ್ವೆ ವರ್ಚ್ಯುಯಲ್ ಆಗಿ ಸಭೆಯಲ್ಲಿ ಭಾಗಿಯಾಗಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕ ಅಧೀರ್ ರಂಜನ್ ಚೌಧರಿ ಸಭೆಯಲ್ಲಿ ಹಾಜರಿರಲಿಲ್ಲ. ಸಮಿತಿಗೆ ಅಧೀರ್ ರಂಜನ್ ಚೌಧರಿ ಅವರನ್ನು ನೇಮಕ ಮಾಡಿದ್ದ ಬೆನ್ನಲ್ಲೇ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ಅವರು, ಸಮಿತಿಯಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿದ್ದರು. "ತನ್ನ ತೀರ್ಮಾನಗಳನ್ನು ಖಾತರಿಪಡಿಸುವ ರೀತಿಯಲ್ಲಿ ಉಲ್ಲೇಖಿತ ನಿಯಮಗಳನ್ನು ಸಿದ್ಧಪಡಿಸಿದ ಸಮಿತಿಯಲ್ಲಿ ಸೇವೆ ಸಲ್ಲಿಸಲು ನಿರಾಕರಿಸಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಚೌಧರಿ ದೂರಿದ್ದರು.