ಮುಂಬೈ: ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುವ ಸುಳ್ಳು ಸುದ್ದಿಯನ್ನು ನಿಯಂತ್ರಿಸುವ ವಿಚಾರವಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ನಿಯಮಗಳಿಗೆ ಈಚೆಗೆ ತಂದಿರುವ ತಿದ್ದುಪಡಿಯು ಸೂಕ್ತ ಮಾರ್ಗಸೂಚಿಗಳು ಇಲ್ಲದೆ ಇದ್ದರೆ, ಸರ್ಕಾರದ ಪ್ರಾಧಿಕಾರಕ್ಕೆ ಅನಿಯಂತ್ರಿತ ಅಧಿಕಾರ ನೀಡುತ್ತದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.
ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರವು, ನಿಯಮಗಳನ್ನು ತಂದಿರುವ ಉದ್ದೇಶವು ಮುಕ್ತ ಅಭಿವ್ಯಕ್ತಿಯನ್ನು ಅಥವಾ ಸರ್ಕಾರವನ್ನು ಗುರಿಯಾಗಿಸಿಕೊಂಡ ಹಾಸ್ಯವನ್ನು ಹತ್ತಿಕ್ಕುವ ಉದ್ದೇಶ ಹೊಂದಿಲ್ಲ ಎಂದು ಹೇಳಿದೆ. ಯಾವುದೇ ವ್ಯಕ್ತಿ ಪ್ರಧಾನಿಯನ್ನು ಟೀಕಿಸುವ ಸ್ವಾತಂತ್ರ್ಯವನ್ನು ಈ ನಿಯಮಗಳು ಕಿತ್ತುಕೊಳ್ಳುವುದಿಲ್ಲ ಎಂದು ತಿಳಿಸಿದೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು, 'ತಿದ್ದುಪಡಿ ತರಬೇಕಾದ ಅಗತ್ಯ ಏನಿತ್ತು, ಸುಳ್ಳು ಸುದ್ದಿ ಯಾವುದು, ನಿಜ ಸುದ್ದಿ ಯಾವುದು ಎಂಬುದನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (ಪಿಐಬಿ) ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿರುವಾಗ ಪ್ರತ್ಯೇಕವಾದ ಸತ್ಯಶೋಧನಾ ಘಟಕವನ್ನು (ಎಫ್‌ಸಿಯು) ರಚಿಸಲು ಕಾನೂನಿನಲ್ಲಿ ಇರುವ ಅವಕಾಶ ಯಾವುದು' ಎಂದು ಕೇಳಿತು.
ನಿಯಂತ್ರಣ ಇಲ್ಲದ ಹಾಗೂ ನಿಯಂತ್ರಿಸಲು ಸಾಧ್ಯವಿಲ್ಲದ ಮಾಧ್ಯಮವೊಂದರಲ್ಲಿ ಸಮತೋಲನ ತರುವ ಉದ್ದೇಶದಿಂದ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿವರಿಸಿದರು.
'ಸತ್ಯ ಯಾವುದು ಎಂಬುದನ್ನು ತೀರ್ಮಾನಿಸುವ ವಿಚಾರದಲ್ಲಿ ಇಲ್ಲಿ ಸರ್ಕಾರವೇ ಎಲ್ಲ ನಿರ್ಣಯಗಳನ್ನೂ ಯಾವ ನಿರ್ಬಂಧವೂ ಇಲ್ಲದೆ ಕೈಗೊಳ್ಳುತ್ತದೆ. ಮೂಲಭೂತ ಪ್ರಶ್ನೆಯೆಂದರೆ, ಇಲ್ಲಿ ಸತ್ಯಶೋಧನೆ ಮಾಡುವವರು ಸರಿಯಾಗಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಯಾರು ಗಮನಿಸುತ್ತಾರೆ? (ನಿಯಮಗಳ ಅಡಿಯಲ್ಲಿ ರಚನೆ ಆಗಬೇಕಿರುವ) ಎಫ್‌ಸಿಯು ವ್ಯವಸ್ಥೆಯನ್ನೇ ನಾವು ಅಂತಿಮ ತೀರ್ಪುಗಾರ ಎಂಬಂತೆ ಕಾಣಬೇಕಿದೆ' ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.
ಎಫ್‌ಸಿಯು ವ್ಯವಸ್ಥೆಯು ಸುಳ್ಳು ಸಂಗತಿಗಳನ್ನು ಮಾತ್ರ ಪರಿಶೀಲಿಸುತ್ತದೆಯೇ ವಿನಾ ಅಭಿಪ್ರಾಯ, ಟೀಕೆಗಳನ್ನು ಅದು ಪರಿಶೀಲಿಸಲು ಮುಂದಾಗುವುದಿಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಯಾಗಿ ನ್ಯಾಯಪೀಠವು, 'ಸರ್ಕಾರ ಹೇಳುವ ಸತ್ಯವೇ ಅಂತಿಮ ಸತ್ಯ ಎನ್ನಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿತು.
'ಸರ್ಕಾರವು ಜನರ ಬುದ್ಧಿಮತ್ತೆಯನ್ನು ಅನುಮಾನದಿಂದ ನೋಡುತ್ತಿಲ್ಲ. ಜನರು ತಮಗೆ ತೋಚಿದ್ದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು, ಸರ್ಕಾರವನ್ನು ಟೀಕಿಸಬಹುದು. ಆದರೆ ಸುಳ್ಳು ಸುದ್ದಿ, ತಪ್ಪುದಾರಿಗೆ ಎಳೆಯುವ ಮಾಹಿತಿಗೆ ಮಾತ್ರ ಅವಕಾಶ ನೀಡುವುದಿಲ್ಲ' ಎಂದು ಮೆಹ್ತಾ ತಿಳಿಸಿದರು.
ಸತ್ಯಶೋಧನಾ ಘಟಕವನ್ನು ಜುಲೈವರೆಗೆ ಆರಂಭಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ಕೋರ್ಟ್‌ಗೆ ಹೇಳಿತ್ತು. ನಂತರ, ಅಕ್ಟೋಬರ್ 3ರವರೆಗೆ ಅದನ್ನು ಆರಂಭಿಸುವುದಿಲ್ಲ ಎಂದು ಹೇಳಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಹಾಗೂ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳಿಗೆ ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ತಿದ್ದುಪಡಿ ತಂದಿದೆ. ಸರ್ಕಾರಕ್ಕೆ ಸಂಬಂಧಿಸಿದಂತೆ ತಪ್ಪುದಾರಿಗೆ ಎಳೆಯುವ, ಸುಳ್ಳು ವಸ್ತು-ವಿಷಯಗಳನ್ನು ಗುರುತಿಸಲು ಎಫ್‌ಸಿಯು ಆರಂಭಿಸುವ ಅವಕಾಶವನ್ನು ಈ ತಿದ್ದುಪಡಿಯು ಒಳಗೊಂಡಿದೆ.