ಭ್ರೂಣದ ವ್ಯಾಖ್ಯಾನ ಬದಲಾಗಲಿದೆಯೇ? ಅದು ಬದಲಾದರೆ ನಮ್ಮ ಮನಸ್ಸಿನ ಚಿತ್ರಣವೂ ಬದಲಾಗುವುದೇ? 'ಭ್ರೂಣಹತ್ಯೆ'! ಈ ಶಬ್ದ ಕೇಳಿದರೂ ಸಾಕು ಸಿಟ್ಟು, ರೇಜಿಗೆಯಾಗುತ್ತದಲ್ಲವೆ? ಇನ್ನೂ ಸ್ವಂತ ಬಾಳು ಬಾಳಲು ಆಗದ ಜೀವವೊಂದನ್ನು ಕೊನೆಗೊಳಿಸಿದ್ದಾರಲ್ಲ ಎಂದು ಅನಿಸುತ್ತದೆ.
ಏನಿದು ಹೊಸ ವ್ಯಾಖ್ಯಾನ ಎಂದಿರಾ? ಭ್ರೂಣ ಎಂದರೆ ನಾವು ಇದುವರೆಗೂ ತಿಳಿದಿದ್ದದ್ದು, ಕಣ್ಣು, ಕಿವಿ, ಮೂಗು ಬೆಳೆದ ಅಲ್ಪ, ಸ್ವಲ್ಪ ಇಲಿ, ಮನುಷ್ಯ ಅಥವಾ ಯಾವುದೇ ಜೀವಿಯ ಆಕಾರ ಇರುವಂತಹುದನ್ನು ಅಷ್ಟೆ. ಈಗಲೂ ನಮಗೆ ನೆನಪಿಗೆ ಬರುವುದು ಇಂತಹ ಭ್ರೂಣವೇ. ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಭ್ರೂಣದ ವ್ಯಾಖ್ಯೆ ಬದಲಾಗಿದೆ. ಭ್ರೂಣ ಎನ್ನುವುದು ಈಗ ಕೇವಲ ಕೋಶಗಳ ಮುದ್ದೆಯೂ ಆಗಬಹುದು. ಅದರಲ್ಲಿ ನಿರ್ದಿಷ್ಟ ಅಂಗಗಳ ಕುರುಹು ಇರಲೇ ಬೇಕು ಅಂತೇನಲ್ಲ. ಈ ಬದಲಾವಣೆಗೆ ಕಾರಣವಿದೆ. ತಂತ್ರಜ್ಞಾನ ಬೆಳೆದಿದೆ. ಈಗ ನಾವು ಹೆಣ್ಣಿನ ದೇಹದ ಒಂದು ಕೋಶ, ಹಾಗೂ ತಂದೆಯ ದೇಹದ ಒಂದು ಜೀವಕೋಶವನ್ನು ತೆಗೆದು, ಹೊರಗೆ ಪ್ರನಾಳದಲ್ಲಿ ಭ್ರೂಣವನ್ನಾಗಿಸಬಹುದು. ಇದಕ್ಕೆ ತಾಯಿಯ ಗರ್ಭದ ಆಸರೆ ಬೇಕೇ ಬೇಕು ಎಂದೇನಿಲ್ಲ. ಆದರೆ ಅನಂತರ ಅದು ಶಿಶುವಾಗಿ ಬೆಳೆಯಬೇಕಾದಾಗ ಮಾತ್ರ ತಾಯಿಯ ಗರ್ಭದೊಳಗೆ ಸೇರಿಸಬೇಕು. ಸಾಮಾನ್ಯವಾಗಿ ಇದು ಮೂವತ್ತೆರಡರಿಂದ ಅರವತ್ತನಾಲ್ಕು ಜೀವಕೋಶಗಳ ಮುದ್ದೆಯಾದ ಹಂತ.
ಯಾವುದೇ ಭ್ರೂಣವೂ ಈ ಮುದ್ದೆಯ ಹಂತವನ್ನು ಮೀರಿದ ನಂತರ 'ಜೀವಿ' ಎನ್ನಿಸಿಕೊಳ್ಳುತ್ತದೆ. ಆಗಲೂ ಅದರಲ್ಲಿ ಕಿವಿ, ಕಣ್ಣು, ಹೃದಯ ಮೊದಲಾದ ಅಂಗಗಳು ಕಾಣಿಸಿಕೊಂಡಿರುವುದಿಲ್ಲ. ಉದಾಹರಣೆಗೆ, ಕನಿಷ್ಠ ಎರಡು ತಿಂಗಳ ಬಸಿರು ಅಂದರೆ ಎಂಟು ವಾರಗಳು ಪೂರ್ತಿಯಾಗುವವರೆಗೂ ಭ್ರೂಣದಲ್ಲಿ ಮನುಷ್ಯರ ಪಿಂಡವೆಂಬ ಕುರುಹೂ ಇರುವುದಿಲ್ಲ. ಹೀಗಾಗಿಯೇ ಅದಾದ ನಂತರ ಯಾವುದೇ ಬಸಿರನ್ನೂ ಕಳೆಯಲು ನಮ್ಮ ದೇಶದಲ್ಲಿ ಅನುಮತಿ ಇಲ್ಲ. ಅದು ಭ್ರೂಣಹತ್ಯೆ ಎನ್ನಿಸಿಕೊಳ್ಳುತ್ತದೆ. ಇದೂ ಬದಲಾಗಬೇಕು. ಭ್ರೂಣ ಎಂದರೆ ಕೇವಲ ಇಷ್ಟೇ ಸಂಖ್ಯೆಗಳ ಕೋಶಗಳ ಮುದ್ದೆ ಆಗಬೇಕಿಲ್ಲ. ಇದೀಗ ಪ್ರಯೋಗಾಲಯಗಳಲ್ಲಿ ಬೆಳೆಸುತ್ತಿರುವ 'ಎಂಬ್ರಿಯಾಯಿಡ್' ಎನ್ನುವ ಅಂಗಾಂಶಗಳನ್ನೂ 'ಭ್ರೂಣ' ಎಂದೇ ವ್ಯಾಖ್ಯಾನಿಸಬೇಕು ಎನ್ನುವುದು ರಿವ್ರಾನ್ ತಂಡದ ವಾದ. ಇದಕ್ಕೆ ಒಂದು ಕಾರಣವಿದೆ. ಇದೀಗ ತಂತ್ರಜ್ಞಾನದ ಸುಧಾರಣೆಯಿಂದಾಗಿ ಮನುಷ್ಯರ ಭ್ರೂಣಗಳನ್ನು ಕುರಿತು ಮಾಡುವ ಅಧ್ಯಯನಗಳನ್ನು ಈ ಎಂಬ್ರಿಯಾಯಿಡ್‌ಗಳನ್ನು ಬಳಸಿ ಮಾಡುತ್ತಿದ್ದಾರೆ. ಆದರೆ ಇವು ನಿಜವಾಗಿಯೂ ಹೊಸ ಜೀವ ಅನ್ನಿಸಿಕೊಳ್ಳದ ಭ್ರೂಣಗಳೋ, ಅಥವಾ ಜೀವವಾಗುವ ಸ್ಥಿತಿ ಮುಟ್ಟಿದವುಗಳೋ ಎನ್ನುವ ವಿವಾದವಿದೆ. ರಿವ್ರಾನ್ ವಾದ ಈ ನಿಟ್ಟಿನಲ್ಲಿ.
ನಲವತ್ತು ವರ್ಷಗಳ ಹಿಂದಿನ ಮಾತು. ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಹುಟ್ಟುವ ಶಿಶುವಿಗೆ ಹಾನಿಯಾಗಬಹುದೇ ಎನ್ನುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದೆವು. ಮನುಷ್ಯಭ್ರೂಣಗಳ ಮೇಲೆ, ಬಸುರಿಯರ ಮೇಲೆ ಪ್ರಯೋಗ ನಡೆಸುವುದು ಆಗುವುದಿಲ್ಲವಲ್ಲ. ಹೀಗಾಗಿ ನಾವೇ ಸಾಕಿ ಬೆಳೆಸಿದ, ಗರ್ಭಿಣಿ-ಇಲಿಗಳನ್ನು ಅಲ್ಟ್ರಾ ಸೌಂಡ್ ವಿಕಿರಣಗಳಿಗೆ ಒಡ್ಡಿ ಪ್ರಯೋಗ ಮಾಡುತ್ತಿದ್ದೆವು. ಈ ಇಲಿಗಳನ್ನು ವಿವಿಧ ಕಾಲಾವಧಿಯ ನಂತರ ಕೊಂದು, ಗರ್ಭದೊಳಗಿನ ಭ್ರೂಣವನ್ನು ತೆಗೆದು, ಅವುಗಳನ್ನೂ ಕತ್ತರಿಸಿ, ವಿವಿಧ ಅಂಗಾಂಶಗಳ ಪರೀಕ್ಷೆ ನಡೆಸುತ್ತಿದ್ದೆವು. ಅಥವಾ ಅವುಗಳಿಂದ ಹುಟ್ಟಿದ ಮರಿಗಳನ್ನು ಅಧ್ಯಯನ ಮಾಡುತ್ತಿದ್ದೆವು.
ಅಂಗಾಂಶಗಳ ಕೃಷಿ, ಅದರಲ್ಲಿಯೂ ಮಾನವನ ಅಂಗಾಂಶಗಳ ಕೃಷಿ ಇನ್ನೂ ಬೆಳೆಯುತ್ತಿದ್ದ ಕಾಲದಲ್ಲಿ ಇದೊಂದೇ ಮನುಷ್ಯನ ಕುರಿತ ಅಧ್ಯಯನದ ದಾರಿಯಾಗಿತ್ತು. ಕಾಲ ಬದಲಾಗಿದೆ. ಇವತ್ತು ಪ್ರಾಣಿಗಳ. ಬದಲಿಗೆ ನೇರವಾಗಿ ಅಂಗಾಂಶಗಳನ್ನಷ್ಟೆ ಬಳಸಿ ಅಧ್ಯಯನ ನಡೆಸುವುದು ಆರಂಭವಾಗಿದೆ. ಹಾಗೆಯೇ ಮನುಷ್ಯನ ಭ್ರೂಣಗಳನ್ನೂ ಅಧ್ಯಯನ ಮಾಡಲಾಗುತ್ತಿದೆ. ಗರ್ಭಸ್ತವಾಗುವುದಕ್ಕೂ ಮುನ್ನಾ ಹಂತದ ಭ್ರೂಣಗಳನ್ನಷ್ಟೆ ಹೀಗೆ ಅಧ್ಯಯನಗಳಿಗೆ ಬಳಸುವುದು ವಾಡಿಕೆ. ಅಂಗಗಳ ಕುರುಹೂ ಇಲ್ಲದ ಇವನ್ನು ಜೀವ ಎನ್ನಲಾಗುವುದಿಲ್ಲವಾದ್ದರಿಂದ, ಅವನ್ನು ಕಸದ ಬುಟ್ಟಿಗೆ ಬಿಸಾಡುವುದೂ ಅನೈತಿಕವಲ್ಲ; ಕಾನೂನು ಬಾಹಿರವೂ ಅಲ್ಲ.
ಇತ್ತೀಚೆಗೆ ಇನ್ನೂ ಒಂದು ಸುಧಾರಣೆ ಆಗಿದೆ. ಭ್ರೂಣಗಳನ್ನು ಇನ್ನಷ್ಟು ಕಾಲ ಬೆಳೆಸಿ, ಅವು ಗರ್ಭದ ಹೊರಗೆ ನಿಜವಾಗಿಯೂ ಪಿಂಡವಾಗಬಹುದೋ ಎಂದು ಪರೀಕ್ಷಿಸುವುದು. ಹೀಗೆ ಬೆಳೆಸಿದ ಭ್ರೂಣಗಳನ್ನೇ 'ಎಂಬ್ರಿಯಾಯಿಡ್' ಎನ್ನುತ್ತಾರೆ. ಇವು ಕೇವಲ ಜೀವಕೋಶಗಳ ಮುದ್ದೆಯಲ್ಲ. ಜೀವಕೋಶಗಳ ಹಲವು ಪದರಗಳಾಗಿರುತ್ತವೆ. ಒಳಗೊಂದು ಪದರ ವಿಶೇಷವಾಗಿ ರೂಪುಗೊಂಡಿರುತ್ತದೆ. ಅದು ಮುಂದೆ ವಿವಿಧ ಅಂಗಗಳಾಗಿ ರೂಪುಗೊಳ್ಳುವ 'ಎಪಿಬ್ಲಾಸ್ಟ್'. ಇದನ್ನು ಇನ್ನಷ್ಟು ಬೆಳೆಸಿದರೆ, ಕಶೇರುಕಗಳಲ್ಲಿ ಕಾಣುವ 'ನರದಂಡ' (ನ್ಯೂರೋಕಾರ್ಡ್) ಎನ್ನುವ ಮುಂದೆ ಮಿದುಳು, ನರಮಂಡಲಗಳಾಗುವ ಅಂಗಾಂಶ ಬೆಳೆಯುತ್ತದೆ. ಹೃದಯ ಮೊಳೆಯುವುದನ್ನೂ ಕಾಣಬಹುದು. ಜೊತೆಗೆ ಒಂದೆರಡು ಪದರ ಜೀವಾಧಾರವಾಗಿಯೂ ಬೆಳೆದಿರುತ್ತವೆ. ಇವು ಅಂಗಗಳಾಗುವುದೂ ಇಲ್ಲ. ಜೀವಿಯಲ್ಲಿಯೂ ಇರುವುದಿಲ್ಲ. ಇಂತಹ ಎಂಬ್ರಿಯಾಯಿಡನ್ನು ಸದ್ಯಕ್ಕೆ ವಿವಿಧ ಬಗೆಯ ವೈಜ್ಞಾನಿಕ ಅಧ್ಯಯನಗಳಿಗಾಗಿ ಮಾತ್ರ ಬಳಸಲಾಗುತ್ತಿದೆ. ಅನಂತರ ಇವು ಕೂಡ ಕಸದ ಬುಟ್ಟಿಗೇ!
ಆದರೆ ಇವನ್ನು ಭ್ರೂಣ ಎಂದಷ್ಟೆ ಹೇಳಬಹುದೇ? ವಿವಿಧ ಅಂಗಗಳ ಮೊಳಕೆ ಕಾಣುವ ಈ ಹಂತ ಜೀವಿ ಅಲ್ಲವೇ? ಹಾಗೆಂದಾಗ ಈ ರೀತಿಯ ಅಧ್ಯಯನಗಳನ್ನು ಕೈಗೊಳ್ಳುವವರೆಲ್ಲರೂ ಅನೈತಿಕ ಹಾಗೂ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆಂದು ಅಲ್ಲವೇ? ಆದ್ದರಿಂದ ಭ್ರೂಣ ಎನ್ನುವ ವಿವರಣೆ ಕಾನೂನಿನಲ್ಲಿಯೂ, ವಿಜ್ಞಾನಿಗಳ ಮಟ್ಟಿಗೂ ಬದಲಾಗಬೇಕು. 'ಎಂಬ್ರಿಯಾಯಿಡ್' ಎನ್ನುವ ಈ ಅಂಗಾಂಶವನ್ನೂ ಭ್ರೂಣ ಎಂದೇ ವ್ಯಾಖ್ಯಾನ ಮಾಡಬೇಕು ಎನ್ನುವುದು ರಿವ್ರಾನ್ ತಂಡದ ವಾದ. ಅಲ್ಲದೆ ಭ್ರೂಣ ಪಿಂಡವಾಗುವ ಹಂತವನ್ನು ನಿರ್ಧರಿಸುವ ವಿಧಾನವನ್ನೂ ಇವರು ಚರ್ಚಿಸಿದ್ದಾರೆ. ಇವರು ಭ್ರೂಣ ಎಂಬುದಕ್ಕೆ ನೀಡಿರುವ ವ್ಯಾಖ್ಯಾನ: 'ಪಿಂಡವಾಗಿ ಬೆಳೆಯಬಲ್ಲ ಸಾಮರ್ಥ್ಯವುಳ್ಳ ಜೀವಕೋಶಗಳ ಮುದ್ದೆ' ಎಂಬ ವಿವರಣೆಯ ಜೊತೆಗೆ 'ಪಿಂಡಕ್ಕೆ ಬೆಂಬಲವಾಗಿರುವ ಭ್ರೂಣಾತೀತ ಪದರಗಳು ಹಾಗೂ ಗರ್ಭಸ್ಥವಾಗಲು ನೆರವಾಗುವ ಜೀವಕೋಶಗಳ ಪದರಗಳಿರುವ' 'ಜೀವಕೋಶಗಳ ಮುದ್ದೆ' ಎನ್ನಬೇಕು. ಇದು ಕಾನೂನಿನ ಪ್ರಕಾರ ಭ್ರೂಣ ಎಂದಾಗಬೇಕು ಎಂದು ಇವರು ಸೂಚಿಸಿದ್ದಾರೆ.
ಅಯ್ಯೋ. ಅಷ್ಟೇನಾ? 'ಭ್ರೂಣ' ಎಂದು ಯಾವಾಗ ಕರೆಯಬೇಕು. 'ಪಿಂಡ' ಎಂದು ಯಾವಾಗ ಎನ್ನುವುದು ಅದೆಂಥ ಸಮಸ್ಯೆ ಎಂದಿರಾ? ನಿಜ. ಹಾಗೆಯೇ ಮೊನ್ನೆ ಸುಪ್ರೀಂ ಕೋರ್ಟು ತೀರ್ಪುಗಳಲ್ಲಿ ಮಹಿಳೆಯರ ಕುರಿತು ಎಂತಹ ಪದಗಳನ್ನು ಬಳಸಬೇಕು ಎಂದು ವ್ಯಾಖ್ಯಾನಿಸಿದೆಯಲ್ಲ. ಅದು ತೀರ್ಪಿನ ಮಟ್ಟಿಗೆ. ಜನರೂ ಹಾಗೆಯೇ ಭಾವಿಸುತ್ತಾರೆಂದು ನಂಬುವುದು ಹೇಗೆ ಕಷ್ಟವೋ ಹಾಗೆಯೇ ಇದುವೂ. ವಿಜ್ಞಾನಿಗಳ ವ್ಯಾಖ್ಯಾನ ಬದಲಾಗಬಹುದು. ನೀತಿ ಹಾಗೂ ಕಾನೂನಿಗೆ ಅದು ಸರಿ ಎನ್ನಿಸಬಹುದು. ಆದರೆ ಅದು ನಮ್ಮ ಮನಸ್ಸಿಗಾಗುವ ರೇಜಿಗೆಯನ್ನು, ಹಿಂಸೆಯನ್ನು ಕಡಿಮೆ ಮಾಡಬಹುದೇ? ಗೊತ್ತಿಲ್ಲ ಎನ್ನುವುದೇ ಸರಿ ಉತ್ತರ.